ಮಡಿಕೇರಿ, ಜು. 21: ಅಕ್ರಮವಾಗಿ ಹರಳು ಕಲ್ಲು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಡಿಕೇರಿ ವಿಭಾಗದ ಅರಣ್ಯ ಇಲಾಖಾ ಸಿಬ್ಬಂದಿಗಳು ಈ ಕೃತ್ಯವನ್ನು ಪತ್ತೆಹಚ್ಚಿದ್ದು, ಲಾರಿ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಡಿಕೇರಿ ನಗರದ ತ್ಯಾಗರಾಜನಗರದಲ್ಲಿ ಈ ಪ್ರಕರಣ ನಡೆದಿದೆ. ಕೆಂಪು ಚುಕ್ಕಿ ಮತ್ತು ಹಸಿರು ಮಿಶ್ರಿತ ಹರಳು ಕಲ್ಲು ಇದಾಗಿದೆ ಎನ್ನಲಾಗಿದೆ. ಸ್ವರಾಜ್ ಮಜ್ದಾ ಲಾರಿ (ಕೆಎ12 ಎ7800)ಯಲ್ಲಿ ಸೈಜ್ ಕಲ್ಲು ಮಾದರಿಯಲ್ಲಿರುವ 3 ಟನ್ ಕಲ್ಲನ್ನು ಸಾಗಾಟ ಮಾಡಲಾಗುತ್ತಿದ್ದ ಸುಳಿವಿನ ಮೇಲೆ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಕಲ್ಲನ್ನು ಪರಿಶೀಲಿಸಿದಾಗ ಇದರಲ್ಲಿ ಕೆಂಪು ಚುಕ್ಕಿ ಮತ್ತು ಹಸಿರು ಮಿಶ್ರಿತ ಹರಳು ಕಲ್ಲು ಇರುವದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಗರಾಜನಗರ ಹಾಗೂ ಆಜಾದ್‍ನಗರದವರಾದ ಇಸ್ಮಾಯಿಲ್ ಎಂ., ಜಬೀಬುಲ್ಲಾ, ಮಹಮದ್ ಆಲಿ, ರಿಜ್ವಾನ್, ವಾಸಿಲ್ ಎಂಬ ನಾಲ್ವರು ಆರೋಪಿಗಳನ್ನು

(ಮೊದಲ ಪುಟದಿಂದ) ಬಂಧಿಸಲಾಗಿದ್ದು, ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಕಲ್ಲನ್ನು ಎಲ್ಲಿಂದ ತರಲಾಗುತಿತ್ತು ಎಂಬ ಬಗ್ಗೆ ಆರೋಪಿಗಳು ಗುಟ್ಟು ಬಿಟ್ಟು ಕೊಟ್ಟಿಲ್ಲವೆನ್ನಲಾಗಿದೆ. ಇದೀಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯಲಾಗುವದು ಎಂದು ಪ್ರಬಾರ ಆರ್.ಎಫ್.ಓ. ಜಗದೀಶ್ ತಿಳಿಸಿದ್ದು, ತನಿಖೆಯ ನಂತರವಷ್ಟೆ ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದಿದ್ದಾರೆ. ‘ಶಕ್ತಿ’ಗೆ ಕೆಲವು ಮೂಲಗಳಿಂದ ತಿಳಿದು ಬಂದಂತೆ ಈ ಕಲ್ಲನ್ನು ಮೇಕೇರಿ ವಿಭಾಗದಿಂದ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಡಿ.ಎಫ್.ಓ. ಸೂರ್ಯಸೇನ್, ಆರ್.ಎಫ್.ಓ. ಜಗದೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ವಿನುತಾ, ಆರೋಗ್ಯಸ್ವಾಮಿ, ಸಿಬ್ಬಂದಿಗಳಾದ ರಾಜಣ್ಣ, ಸಂದೇಶ್, ವಾಸುದೇವ್ ಪಾಲ್ಗೊಂಡಿದ್ದರು.