ಭಾಗಮಂಡಲ, ಜು. 20: ಎಲ್ಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದ ಯೋಜನಾ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ ಹೇಳಿದರು. ಭಾಗಮಂಡಲ ಪದವಿಪೂರ್ವ ಕಾಲೇಜಿನಲ್ಲಿ ಸಿಸ್ಕೋ ಸಂಭ್ರಮ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಮಾತನಾಡಿ ಸಿಸ್ಕೋ ಸಂಸ್ಥೆಯ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಾಗಲಿದೆ ಎಂದರು.
ಅಧ್ಯಾಪಕ ಕಿಶೋರ್‍ಕುಮಾರ್ ಮಾತನಾಡಿ ನಗರ ಮತ್ತು ಗ್ರಾಮೀಣ ಮಕ್ಕಳ ಸಾಮಥ್ರ್ಯ ಒಂದೇ ರೀತಿ ಇದ್ದರೂ ಪ್ರತಿಭೆಯನ್ನು ಹೊರಹಾಕಲು ಅವಕಾಶಗಳ ಲಭ್ಯತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಇರುವದರಿಂದ ಸಿಸ್ಕೋ ಸಂಭ್ರಮ ತಂಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಒದಗಿಸುವ ಎನ್‍ಎಂಎಂಎಸ್ ಮತ್ತು ಎನ್‍ಟಿಎಸ್‍ಇ ಪರೀಕ್ಷೆ ಎದುರಿಸಲು ಆನ್‍ಲೈನ್ ಕೋಚಿಂಗ್ ಏರ್ಪಡಿಸುವದು ಹಾಗೂ ಇತರ ಕ್ರೀಡಾ ಚಟುವಟಿಕೆಗಳಲ್ಲಿ ವಿವಿಧ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಮುಂದಾಗಿದೆ ಎಂದರು.
ಶಿಕ್ಷಕ ಶ್ರೀಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ ಸಿಸ್ಕೋ ಸಾಫ್ಟ್‍ವೇರ್ ಸಂಸ್ಥೆಯು ಭಾಗಮಂಡಲ ಶಾಲೆಯನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದು ಇದಕ್ಕೆ ವಿಜ್ಞಾನ ಶಿಕ್ಷಕಿ ಗೀತಾಭಾವೆ ಅವರ ಪರಿಶ್ರಮ ಅಪಾರವಾಗಿದೆ ಎಂದರು. ಸಿಸ್ಕೋ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿನ ಶೇಕಡವಾರು ಫಲಿತಾಂಶವನ್ನು ಹೆಚ್ಚಿನ ಮಟ್ಟದಲ್ಲಿ ನಿರೀಕ್ಷಿಸಲಿದೆ. ಈ ಸಂದರ್ಭ ಸ್ಥಳೀಯ ಶಾಲೆಗಳಾದ ಅಯ್ಯಂಗೇರಿ, ಭಾಗಮಂಡಲ, ಚೆಟ್ಟಿಮಾನಿ ಶಾಲೆಗಳಿಗೆ ಗಣಿತ ಕಿಟ್‍ಅನ್ನು ಸಂಸ್ಥೆಯ ವತಿಯಿಂದ ನೀಡಲಾಗಿದ್ದು ಪ್ರಾಂಶುಪಾಲೆ ಜಾನಕಿ ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಹ್ಯಾರೀಸ್, ನಾರಾಯಣಾಚಾರ್, ಶಿಕ್ಷಕಿ ಗೀತಾಭಾವೆ ಸಂಪನ್ಮೂಲ ವ್ಯಕ್ತಿ ಶ್ರೀಧರ್, ನಿರ್ದೇಶಕ ಮತ್ತಾರಿ ರಾಜ, ಜಿ. ನಂಜುಂಡಪ್ಪ, ಪುಷ್ಪ ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಶಿಕ್ಷಕರಾದ ಅವಿನಾಶ್ ಮತ್ತು ಲೋಕನಾಥ ನಿರೂಪಿಸಿದರು.