ಮಡಿಕೇರಿ ಜು. 21 : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸಾಕಷ್ಟು ಕಷ್ಟ, ನಷ್ಟಗಳನ್ನು ಉಂಟುಮಾಡಿದೆ. ಕೊಯನಾಡು ಭಾಗದಲ್ಲಿ ಸೂಕ್ತ ಸೇತುವೆ ಮತ್ತು ರಸ್ತೆ ವ್ಯವಸ್ಥೆಗಳಿಲ್ಲದೆ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೊಯನಾಡು ರಬ್ಬರ್ ಎಸ್ಟೇಟ್ ಸಮೀಪದ ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ಮುಳುಗುತ್ತಿರುವದರಿಂದ ಗ್ರಾಮಸ್ಥರ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರ ಮೇಲ್ಭಾಗದಲ್ಲಿರುವ ಕಾಲು ಸೇತುವೆ ಕೂಡ ಅಪಾಯದ ಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದು ತೆರಳಬೇಕಾದ ಪರಿಸ್ಥಿತಿ ಇದೆ.

ಈ ಎರಡೂ ಸೇತುವೆಗಳು ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು, ಸಂಪೂರ್ಣವಾಗಿ ಶಿಥಿಲಗೊಂಡಿವೆ. ಬೀಳುವ ಸ್ಥಿತಿಯನ್ನು ಹೊಂದಿರುವ ಸೇತುವೆಗಳನ್ನೇ ಗ್ರಾಮಸ್ಥರು ಅವಲಂಬಿಸಬೇಕಾಗಿದೆ. ತುಂಬಿ ಹರಿಯುತ್ತಿರುವ ಹೊಳೆಯ ನಡುವೆ ಆತಂಕದಿಂದಲೇ ಸೇತುವೆ ದಾಟುವ ವಿದ್ಯಾರ್ಥಿಗಳಿಗೆ ಪೋಷಕರೊಂದಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಪ್ರತಿ ಮಳೆಗಾಲದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವ ಸೇತುವೆಗಳ ಬಗ್ಗೆ ಮಳೆ ಕಳೆದ ನಂತರ ಯಾರಿಗೂ ಕಾಳಜಿ ಇಲ್ಲದಾಗಿದೆ.