ಮಡಿಕೇರಿ, ಜು. 21: ಕುಶಾಲನಗರದ ಅನುಗ್ರಹ ಎಜುಕೇಷನ್ ಟ್ರಸ್ಟ್‍ನವರು ಅನುಗ್ರಹ ಪದವಿಪೂರ್ವ ಕಾಲೇಜು ಹೆಸರಿನಲ್ಲಿ ಪ್ರಸಕ್ತ ವರ್ಷದಿಂದ ಪದವಿಪೂರ್ವ ಕಾಲೇಜನ್ನು ಆರಂಭಿಸಿದ್ದು, ಅನುಗ್ರಹ ಪದವಿಪೂರ್ವ ಕಾಲೇಜು ನಡೆಸಲು ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ತಿರಸ್ಕರಿಸಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ. ಸ್ವಾಮಿ ತಿಳಿಸಿದ್ದಾರೆ.

ಅನುಗ್ರಹ ಪದವಿಪೂರ್ವ ಕಾಲೇಜು ಆರಂಭಕ್ಕೆ ಅರ್ಜಿ ಸಲ್ಲಿಸಿದ್ದರೂ ಸಹ ಇಲಾಖೆ ತಿರಸ್ಕರಿಸಿರುವದರಿಂದ ಪೋಷಕರು, ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಟಿ. ಸ್ವಾಮಿ ಕೋರಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಪ್ರಥಮ ಪಿ.ಯು.ಸಿ. ತರಗತಿಗಳನ್ನು ಅನಧಿಕೃತವಾಗಿ ಆರಂಭಿಸಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿಗೆ ದಾಖಲಿಸಿಕೊಂಡಿರುವದು ಇಲಾಖೆಯ ಕಾನೂನಿಗೆ ವಿರುದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗುತ್ತದೆ. ಇದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯವರೇ ನೇರ ಜವಾಬ್ದಾರರಾಗಬೇಕಾಗುತ್ತದೆ ಎಂದು ಟಿ. ಸ್ವಾಮಿ ತಿಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯವರು ಈಗಾಗಲೇ ಪ್ರಥಮ ಪಿ.ಯು.ಸಿ. ತರಗತಿಗಳಿಗೆ ದಾಖಲಾತಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಟಿ. ಸ್ವಾಮಿ ಹೇಳಿದ್ದಾರೆ.