ಮಡಿಕೇರಿ, ಜು.20: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯ ಕೆ.ಎಂ.ಗಣೇಶ್ ಕಾಂಗ್ರೆಸ್ ಪಕ್ಷಕ್ಕೆ ಇಂದು ರಾಜೀನಾಮೆ ನೀಡಿದ್ದು, ತಾ.27 ರಂದು ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ನಗರಸಭೆಯ ಕಾಂಗ್ರೆಸ್ ಸದಸೆÀ್ಯ ಲೀಲಾ ಶೇಷಮ್ಮ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿ ಜೆಡಿಎಸ್‍ಗೆ ಸೇರುವದಾಗಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಗಣೇಶ್, ಕಾಂಗ್ರೆಸ್ ಪಕ್ಷದಲ್ಲಿ ಜೀತದಾಳುವಿನಂತೆ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು, ನಾಯಕರ ವರ್ತನೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ

(ಮೊದಲ ಪುಟದಿಂದ) ನೀಡುತ್ತಿರುವದಾಗಿ ತಿಳಿಸಿದರು. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ದುಡಿದ ತನ್ನನ್ನು ಪಕ್ಷದ ನಾಯಕರು ಕಡೆಗಣಿಸಿದ್ದಾರೆ. ಹೋಗುವವರೆಲ್ಲ ಹೋಗಲಿ ಎಂದು ನಾಯಕರು ಹೇಳಿಕೆ ನೀಡುತ್ತಿದ್ದಾರೆ, ಈ ರೀತಿಯ ಹೇಳಿಕೆಗಳಿಂದ ಪಕ್ಷದಲ್ಲಿ ಯಾರೂ ಉಳಿಯುವದಿಲ್ಲವೆಂದು ಅಭಿಪ್ರಾಯಪಟ್ಟ ಗಣೇಶ್, ಮತೀಯವಾದ ಮತ್ತು ಕೋಮುವಾದದಿಂದ ದೂರ ಉಳಿಯಬೇಕಾಗಿದ್ದ ಕಾಂಗ್ರೆಸ್‍ನಲ್ಲಿ ರಾತ್ರಿ ಒಂದು ಬೆಳವಣಿಗೆಯಾದರೆ, ಹಗಲಿನಲ್ಲೊಂದು ಬೆಳವಣಿಗೆಯಾಗುತ್ತಿರುತ್ತದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿಗರು ಅನೇಕರು ಬಿಜೆಪಿ ಮಂದಿಗೆ ಬೆಂಬಲ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೂ ಕೊಡಗು ಜಿಲ್ಲೆಯಲ್ಲಿ ಸರಕಾರದ ಅನುದಾನದಿಂದ ಬಿಜೆಪಿ ಪ್ರತಿನಿಧಿಗಳ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಾಗುತ್ತಿದೆ ಎಂದು ಗಣೇಶ್ ಆರೋಪಿಸಿದರು.

ಒಂದು ರಾಷ್ಟ್ರೀಯ ಪಕ್ಷಕ್ಕೆ ಸಾವೆನ್ನುವದು ಬರಬಾರದು, ಆದರೆ ಕಾಂಗ್ರೆಸ್ ಪಕ್ಷದ ನಾಯಕರುಗಳಿಂದಾಗಿಯೇ ಕೊಡಗು ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಕಾರ್ಯಕರ್ತರ ಮತ್ತು ಪಕ್ಷದ ಹಿತ ಕಾಯದ ನಾಯಕರುಗಳು ಕೇವಲ ಚುನಾವಣೆ ಸಂದರ್ಭ ಟಿಕೆಟ್‍ಗಾಗಿ ಹವಣಿಸುತ್ತಾರೆ. ಎಲ್ಲರೂ ಟಿಕೆಟ್ ಆಕಾಂಕ್ಷಿಗಳಾಗುತ್ತಿರುವದರಿಂದ ಮತ್ತು ಹತ್ತರಲ್ಲಿ ಒಂಭತ್ತು ಮಂದಿ ಕಾಂಗ್ರೆಸ್ಸಿಗರು ಕಾಂಗ್ರೆಸ್ಸಿಗರನ್ನೇ ಸೋಲಿಸಲು ಮುಂದಾಗುತ್ತಿರುವದರಿಂದ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ತಪ್ಪಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಅವರಿಗೆ ಟಿಕೆಟ್ ನೀಡುವದಕ್ಕಾಗಿ ಶಿವು ಮಾದಪ್ಪ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ ಎಂದು ಕೆ.ಎಂ.ಗಣೇಶ್ ಆರೋಪಿಸಿದರು.

ಜೆಡಿಎಸ್ ಸೇರ್ಪಡೆ

ನಾಯಕರ ವರ್ತನೆಯಿಂದ ಬೇಸತ್ತು ಅನೇಕ ಮಂದಿ ಪಕ್ಷವನ್ನು ಬಿಡಲು ಮುಂದಾಗಿದ್ದಾರೆ. ತಾ.27 ರಂದು ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆಯುವ ಜೆಡಿಎಸ್ ಸಭೆಯಲ್ಲಿ ಮುಖಂಡರಾದ ಜಿ.ಟಿ.ದೇವೇಗೌಡ, ಬಿ.ಎ.ಜೀವಿಜಯ, ಹೆಚ್.ವಿಶ್ವನಾಥ್, ಎಂ.ಸಿ.ನಾಣಯ್ಯ, ವಿ.ಎಂ. ವಿಜಯ ಮತ್ತಿರರ ಸಮ್ಮುಖದಲ್ಲಿ ತಾವೂ ಸೇರಿದಂತೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನ ಅನೇಕರು ಜೆಡಿಎಸ್‍ಗೆ ಸೇರ್ಪಡೆಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‍ನ ಬೃಹತ್ ಸಮಾವೇಶವನ್ನು ನಡೆಸಲಾಗುವದು. ಈ ಸಂದರ್ಭ ಮತ್ತು ವಿಧಾನಸಭಾ ಚುನಾವಣೆ ಘೋಷಣೆಯಾಗುವ ವೇಳೆ ಕೂಡ ಅನೇಕ ಕಾಂಗ್ರೆಸ್ಸಿಗರು ಜೆಡಿಎಸ್‍ಗೆ ಸೇರಲಿದ್ದಾರೆ ಎಂದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಬಿ.ಎ.ಜೀವಿಜಯ ಅವರನ್ನು ಗೆಲ್ಲಿಸುವದೇ ತಮ್ಮ ಗುರಿ ಎಂದು ಕೆ.ಎಂ.ಗಣೇಶ್ ತಿಳಿಸಿದರು.

ನಗರಸಭೆಯಲ್ಲಿ ಪ್ರತ್ಯೇಕ ಆಸನ

ನಗರಸಭಾ ಅಧ್ಯಕ್ಷರ ಬಗ್ಗೆ ವಿಶ್ವಾಸ ಕಳೆದುಕೊಂಡಿರುವ ಸದಸ್ಯರುಗಳಾದ ಲೀಲಾಶೇಷಮ್ಮ, ಶ್ರೀಮತಿ ಬಂಗೇರ, ವೀಣಾಕ್ಷಿ ಹಾಗೂ ತಾವು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದು, ಸಭೆಗಳಲ್ಲಿ ನಮಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ನಗರಸಭಾ ಸದಸೆÀ್ಯ ಲೀಲಾಶೇಷಮ್ಮ ಮಾತನಾಡಿ, ತಾವು ಕೂಡ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವದಾಗಿ ತಿಳಿಸಿದರು. ನಮ್ಮಂತಹ ಬಡ ವರ್ಗದ ರಾಜಕಾರಣಿಗಳಿಗೆ ಹಾಗೂ ಅಸಹಾಯಕರಿಗೆ ಬಲವಾದ ನಾಯಕತ್ವ ಬೇಕಾಗಿತ್ತು. ತಾನು ಅವಮಾನಕ್ಕೀಡಾಗುತ್ತಿದ್ದಾಗ ಪಕ್ಷದ ನಾಯಕರು ತನ್ನ ಸಹಾಯಕ್ಕೆ ಬರುತ್ತಿರಲಿಲ್ಲ, ಆದರೆ ಕೆ.ಎಂ.ಗಣೇಶ್ ಅವರು ತÀನ್ನ ಬೆಂಬಲಕ್ಕೆ ಇದ್ದ ಕಾರಣ ಅವರೊಂದಿಗೆ ತಾನು ಕೂಡ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವದಾಗಿ ತಿಳಿಸಿದರು.

ಬಡ ವರ್ಗ ಮತ್ತು ಮಹಿಳೆ ಎನ್ನುವ ಕಾರಣಕ್ಕಾಗಿ ನಮ್ಮ ಪಕ್ಷದ ಕೆಲವು ಮಂದಿ ನಿಂದನೆ ಮಾಡಿದ್ದಾರೆ. ಸದಸ್ಯ ಹೆಚ್.ಎಂ.ನಂದಕುಮಾರ್ ಅವರು ತಾನು ಉಪಾಧ್ಯಕ್ಷ ಸ್ಥಾನದಲ್ಲಿದ್ದಾಗ ಉಪಾಧ್ಯಕ್ಷರು ವೇದಿಕೆಯಲ್ಲಿ ಮಾತನಾಡಬಾರದೆಂದು ಗದರಿಸಿದ್ದರು ಎಂದು ಆರೋಪಿಸಿದ ಲೀಲಾಶೇಷಮ್ಮ, ಈಗಿನ ಉಪಾಧ್ಯಕ್ಷರು ಸಾಕಷ್ಟು ಮಾತನಾಡುತ್ತಿದ್ದರೂ ನಂದಕುಮಾರ್ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಪಕ್ಷದೊಳಗಿನ ಕೆಲವು ವ್ಯಕ್ತಿಗಳ ನಿಂದನೆಯಿಂದ ಸಾಕಷ್ಟು ನೊಂದುಕೊಂಡಿದ್ದು, ಇದೇ ಕಾರಣಕ್ಕಾಗಿ ಪಕ್ಷ ತೊರೆಯುತ್ತಿರುವದಾಗಿ ಅವರು ಸ್ಪಷ್ಟಪಡಿಸಿದರು.

ನಾಕೂರು ಶಿರಂಗಾಲ ಗ್ರಾ.ಪಂ. ಸದಸ್ಯ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಬಿಜು ಮಾತನಾಡಿ, ತಾವೂ ಕೂಡ ಕಾಂಗ್ರೆಸ್‍ಗೆ ರಾಜೀನಾಮೆ ನೀಡುತ್ತಿರುವದಾಗಿ ತಿಳಿಸಿದರು. ಪಂಚಾಯ್ತಿ ವ್ಯಾಪ್ತಿಯ ಮಳ್ಳೂರು ವಿಭಾಗದ ಕುಡಿಯುವ ನೀರಿನ ಕಾಮಗಾರಿಗಳಿಗೆ ಜಿ.ಪಂ ಸದಸೆÀ್ಯ ಕೆ.ಪಿ.ಚಂದ್ರಕಲಾ ಮುಖ್ಯ ಕಾರ್ಯದರ್ಶಿಗಳ ವಿವೇಚನಾ ನಿಧಿಯಿಂದ 10 ಲಕ್ಷ ರೂ.ಗಳನ್ನು ಒದಗಿಸಿದ್ದರು. ಆದರೆ, ತಮ್ಮದಲ್ಲದ ಕ್ಷೇತ್ರದ ಸದಸ್ಯರು ಹಣ ಒದಗಿಸಿದ್ದಾರೆ ಎನ್ನುವ ಭಾವನೆಯಿಂದ ಜಿ.ಪಂ ಕಾಂಗ್ರೆಸ್ ಸದಸೆÀ್ಯ ಕುಮುದಾ ಧರ್ಮಪ್ಪ ಅವರು ಆ ಹಣವನ್ನು ತಡೆ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಬೆಳವಣಿಗೆ ಹಾಗೂ ಪಕ್ಷದ ಕಾರ್ಯಕರ್ತರ ಕಡೆಗಣನೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವದಾಗಿ ಸ್ಪಷ್ಟಪಡಿಸಿದರು.

ಮರಗೋಡು ಗ್ರಾ.ಪಂ ಸದಸ್ಯ ಮುಂಡೋಡಿ ನಂದ ಮಾತನಾಡಿ, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ತಮ್ಮ ಪಂಚಾಯ್ತಿಯಲ್ಲಿ ಉದ್ದೇಶಿತ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿದರು. ನಾವು ಪಕ್ಷದಲ್ಲಿ ಗುಲಾಮರಂತೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವ ಒಲವು ಜನರಿಂದ ವ್ಯಕ್ತವಾಗುತ್ತಿದ್ದು, ಜಿಲ್ಲೆಯಲ್ಲೂ ಜೆಡಿಎಸ್‍ನ ಬಲವರ್ಧನೆಗೆ ತಾವುಗಳು ಶ್ರಮಿಸಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವದಾಗಿ ನಂದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೆÉೀರಿ ಬ್ಲಾಕ್ ಕಾಂಗ್ರೆಸ್‍ನ ಕಾರ್ಯದರ್ಶಿ ಸುಖೇಶ್ ಬಿದ್ದಪ್ಪ ಹಾಗೂ ಸುಂಟಿಕೊಪ್ಪ ಗ್ರಾ.ಪಂ ಸದಸ್ಯ ಕರೀಂ ಉಪಸ್ಥಿತರಿದ್ದರು.