ನವದೆಹಲಿ, ಜು. 21: ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕೊಡಗಿನ ಕೊಡವ ಭಾಷೆಯನ್ನು ಭಾರತದ ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡಿಸಲು ಆಗ್ರಹಿಸಿದ್ದರು. ಕೊಂಕಣಿ ಮತ್ತು ಕೊಡವ ಈ ಎರಡೂ ಭಾಷೆಗಳ ಅಳವಡಿಕೆಗೆ ಒತ್ತಾಯಿಸಿದ್ದರು. ಇಂದು ಈ ಕುರಿತಾಗಿ ಭಾಷಾ ವಿಧೇಯಕದ ಬಗ್ಗೆ ಅಪರಾಹ್ನ 2.30ರಿಂದ ಸಂಜೆ 5ರವರೆಗೆ ದೀರ್ಘಕಾಲದ ಚರ್ಚೆ ನಡೆಯಿತು. ದೇಶದಲ್ಲಿ ಹಿಂದಿ ಹೇರಿಕೆ ವಿರುದ್ಧ ಮಾತನಾಡಿದ ಹರಿಪ್ರಸಾದ್ ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳ ಪ್ರಾಮುಖ್ಯತೆ ಕುರಿತು ಸಮರ್ಥಿಸಿ ಮಾತನಾಡಿದರು. ಅದರಂತೆ ಸ್ಥಳೀಯ ಭಾಷೆಗಳಿಗೂ ಮಾನ್ಯತೆ ನೀಡಬೇಕೆಂದ ಅವರು ಮತ್ತೆ ಇಂದು ಕೊಡವ- ಕೊಂಕಣಿ ಭಾಷೆಗಳ ಪರಿಗಣನೆಗೆ ಒತ್ತಾಯಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರದ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಯಾವದೇ ಭಾಷೆಯನ್ನು ಹೇರುವದಿಲ್ಲ. ಹಿಂದಿ ಅಧಿಕೃತ ಭಾಷೆಯಷ್ಟೆ. ಇತರ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ ಎಂದರು. ಸಂಸದ ಹರಿಪ್ರಸಾದ್ ಅವರಿಂದ ರಾಜ್ಯಸಭೆಯಲ್ಲಿ ಕೊಡವ ಭಾಷೆಯ ಪರ ನಿರಂತರ ಸಮರ್ಥನೆಯನ್ನು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಸ್ವಾಗತಿಸಿದ್ದಾರೆ.