ಸೋಮವಾರಪೇಟೆ, ಜು.21: ತಾಲೂಕಿನ ಶನಿವಾರಸಂತೆ ಹೋಬಳಿ ದೊಡ್ಡಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಅದೇ ಗ್ರಾಮದ ದಲಿತ ನಾಯಕರೆನಿಸಿಕೊಂಡವರು ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಳ್ಳದೇ ಠಾಣಾಧಿಕಾರಿಗಳು ಮೌನ ವಹಿಸಿದ್ದಾರೆ. ಈ ಹಿನ್ನೆಲೆ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ಮಾಡುವದಾಗಿ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್, ಸುಮಾರು 100ಕ್ಕೂ ಅಧಿಕ ವರ್ಷಗಳಿಂದ ದೊಡ್ಡಳ್ಳಿ ಗ್ರಾಮದಲ್ಲಿ ನೆಲೆಸಿರುವ ರುದ್ರಯ್ಯ ಅವರ ಕುಟುಂಬದ ಮೇಲೆ ಅದೇ ಗ್ರಾಮದ ದಲಿತ ಮುಖಂಡರೋರ್ವರು ಕಳೆದ ಅನೇಕ ತಿಂಗಳುಗಳಿಂದ ದೌರ್ಜನ್ಯವೆಸಗಿದ್ದು ಅಲ್ಲದೇ ಇತ್ತೀಚೆಗೆ ವಾಸದ ಮನೆಯನ್ನು ಜಖಂಗೊಳಿಸಿದ್ದಾರೆ. ಇದರಿಂದಾಗಿ ರುದ್ರಯ್ಯ ಅವರ ಕುಟುಂಬ ಬೀದಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ ಎಂದು ಆರೋಪಿಸಿದರು.

ರುದ್ರಯ್ಯ ಅವರಿಗೆ ಸೇರಿದ ವಾಸದ ಮನೆಯ ಗೋಡೆ, ಕಿಟಕಿ ಬಾಗಿಲುಗಳನ್ನು ಒಡೆದು, ಮನೆಯೊಳಗಿದ್ದ ಒಂದೂವರೆ ಲಕ್ಷ ಮೌಲ್ಯದ ಸೊತ್ತುಗಳನ್ನು ಅಪಹರಿಸಲಾಗಿದೆ. ಜತೆಗೆ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದಾರೆ. ಇದರೊಂದಿಗೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಕಟಾವು ಮಾಡದಂತೆ ಬೆದರಿಸಿ ಊರಿನಿಂದಲೇ ಹೊರ ಹಾಕಿದ್ದಾರೆ. ದಲಿತರ ಅಭಿವೃದ್ಧಿಗೆ ಶ್ರಮಿಸಬೇಕಾದ ಈ ವ್ಯಕ್ತಿ ಅವರುಗಳ ಮೇಲೆಯೇ ದೌರ್ಜನ್ಯವೆಸಗಿ ಗ್ರಾಮದ ಕೆಲವರನ್ನು ಗುಂಪು ಕಟ್ಟಿಕೊಂಡು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಮಂಜುನಾಥ್ ಅವರು ಗಂಭೀರ ಆರೋಪ ಮಾಡಿದರು.

ರುದ್ರಯ್ಯ ಅವರ ಮನೆಗೆ ತೆರಳುವ ರಸ್ತೆಗೆ ಅಕ್ರಮವಾಗಿ ಬೇಲಿ ನಿರ್ಮಿಸಿ ತಡೆಯೊಡ್ಡಿರುವದು, ಮನೆಯನ್ನು ದ್ವಂಸಗೊಳಿಸಿ ಜೀವ ಬೆದರಿಕೆ ಒಡ್ಡಿರುವದು, ಮರಗಳನ್ನು ಅಕ್ರಮವಾಗಿ ಕಡಿದಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಅಲ್ಲಿನ ಠಾಣಾಧಿಕಾರಿಗಳು ನ್ಯಾಯ ಒದಗಿಸಿಕೊಟ್ಟಿಲ್ಲ ಎಂದು ದೂರಿದರು.

ಈ ಹಿಂದೆ ನಡೆದ ಠಾಣಾಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿ ನಕಲಿ ದಲಿತ ಮುಖಂಡನನ್ನೇ ಹೆಸರಿಸಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಈ ಭಾಗದ ಹಲವಷ್ಟು ದಲಿತ ದೌರ್ಜನ್ಯ ದೂರುಗಳನ್ನು ‘ಸೆಟಲ್‍ಮೆಂಟ್’ ಮೂಲಕ ಸಮಾಧಿ ಮಾಡಲಾಗುತ್ತಿದೆ. ಇದರೊಂದಿಗೆ ಕಂದಾಯ ಇಲಾಖೆಯಲ್ಲೂ ಈತ ಮಧ್ಯವರ್ತಿ ಯಾಗಿದ್ದು, ಬಡವರಿಗೆ ತೀರಾ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಪ್ರಕರಣವನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮಂಜುನಾಥ್ ಆಗ್ರಹಿಸಿದರು.

ಮುಂದಿನ 15 ದಿನಗಳ ಒಳಗೆ ದಲಿತರಿಗೆ ನ್ಯಾಯ ದೊರಕಿಸಿ ಕೊಡದೆ ದೌರ್ಜನ್ಯ ಎಸಗಿದವರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಠಾಣಾಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಸಂತ್ರಸ್ಥ ರುದ್ರಯ್ಯ ಅವರ ಮನೆಗೆ ದಾರಿ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿ ಶನಿವಾರಸಂತೆ ಪೊಲೀಸ್ ಠಾಣೆಯ ಎದುರು ಸಂಘಟನೆಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘದ ಪ್ರಮುಖರಾದ ಸಿದ್ದಯ್ಯ, ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಸಣ್ಣಪ್ಪ, ದೊಡ್ಡಳ್ಳಿ ಗ್ರಾಮದ ರುದ್ರಯ್ಯ, ಪುತ್ರ ಮಹೇಶ್ ಸೇರಿದಂತೆ ಕುಟುಂಬದವರು ಉಪಸ್ಥಿತರಿದ್ದರು.