ಕೂಡಿಗೆ, ಜು. 21: ಜಿಲ್ಲೆಯಲ್ಲಿರುವ ಹಲವಾರು ಸಹಕಾರ ಸಂಘಗಳು ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭ ಬೆಳೆ ವಿಮೆಯನ್ನು ಕಟ್ಟಿಸಿಕೊಳ್ಳುವದು ಸಾಮಾನ್ಯ. ಬೆಳೆ ನಷ್ಟವಾದಾಗ ಪರಿಹಾರ ನೀಡುತ್ತಾರೆ ಎಂದು ಬೆಳೆ ವಿಮೆ ಕಟ್ಟಿದ ರೈತರು ಇದೀಗ ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿಯದೆ ಬೆಳೆ ನಷ್ಟವಾಗಿ ಕಂಗಾಲಾಗಿದ್ದಾರೆ.ಸಹಕಾರ ಸಂಘಗಳಲ್ಲಿ ಬೆಳೆವಿಮೆ ಯೋಜನೆಯಡಿಯಲ್ಲಿ ಕಡ್ಡಾಯ ಮಾನದಂಡವಿಟ್ಟು ಹಣ ಕಟ್ಟಿಸಿಕೊಳ್ಳಲಾಗಿದೆ. ರೈತರುಗಳಿಗೆ ನೀಡುವ ಕೆಸಿಸಿ ಸಾಲದ ಅನುಗುಣವಾಗಿ ಅವರುಗಳ ಜಮೀನಿನ ದಾಖಲಾತಿ ಹಾಗೂ ಅವರು ಬೆಳೆಗಳ ಆಧಾರದ ಮೇಲೆ ಸಾಲದ ಬಾಬ್ತುವಿನ ಜೊತೆ ಬೆಳೆ ವಿಮೆಯನ್ನು ರೈತರುಗಳು ಕಟ್ಟುತ್ತಾರೆ. ಅದರಂತೆ ಸಮೀಪದ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2016-17ನೇ ಸಾಲಿನಲ್ಲಿ ರೈತರುಗಳು ಕೆಸಿಸಿ ಸಾಲ ಪಡೆಯುವ ಸಂದರ್ಭ ಸಂಘದ ಸದಸ್ಯತ್ವ ಹೊಂದಿರುವ 1200 ರೈತರಿಂದ 7 ಲಕ್ಷಕ್ಕು ಅಧಿಕ ರೈತರು ಬೆಳೆವಿಮೆ ಕಟ್ಟಿದ್ದಾರೆ. ಈ ಭಾಗದ ರೈತರುಗಳ ಜೋಳ ಮತ್ತು ಇತರೆ ಬೆಳೆಗಳಿಗೆ ಸಾಲವನ್ನು ಪಡೆದಿದ್ದಾರೆ. ತೊರೆನೂರು ಸಹಕಾರ ಸಂಘಕ್ಕೆ ಒಳಪಡುವ 12 ಗ್ರಾಮಗಳಲ್ಲಿ ಶೇ. 75 ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಆದರೆ, ಸಂಬಂಧಪಟ್ಟ ಬೆಳೆ ವಿಮೆಯ ಸಂಸ್ಥೆ ಅಥವಾ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಇದುವರೆಗೂ ರೈತರುಗಳಿಗೆ ಬೆಳೆವಿಮೆಯ ಪರಿಹಾರದ ಬಗ್ಗೆ ಯಾವದೇ ಸ್ಪಷ್ಟ ಮಾಹಿತಿಯೂ ಇಲ್ಲ.

ಸ್ಪಲ್ಪ ಜನರಿಗೆ ಕೊಡಲಾಗಿದೆ ಎಂದು ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಈ ಸಾಲಿನಲ್ಲಿ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಮೂಲಕ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿಕೆ ನೀಡಿರುವದು ಜನರಲ್ಲಿ ಗೊಂದಲವುಂಟು ಮಾಡಿದೆ.

ಜಿಲ್ಲೆಯ ಎಷ್ಟು ರೈತರಿಗೆ ಪರಿಹಾರದ ಸೌಲಭ್ಯ ನೀಡಲಾಗಿದೆ ಎಂಬದನ್ನು ಕಂದಾಯ ಇಲಾಖೆಯವರು ಸಹ ಸ್ಪಷ್ಟ ಮಾಹಿತಿ ತಿಳಿಸಲಿಲ್ಲ. ಕೆಲವು ರೈತರುಗಳಿಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಲಾಗಿದೆ ಎಂದು ಹೇಳುತ್ತಿರುವದು ಕ್ರಮವಲ್ಲ ಎಂದು ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಎಸ್. ಕೃಷ್ಣೇಗೌಡ, ರೈತ ಮುಖಂಡರುಗಳಾದ ಟಿ.ಕೆ. ಪಾಂಡುರಂಗ, ಜಗದೀಶ್, ಗಣೇಶ್, ಮಹೇಶ್ ಕುಮಾರ್ ಸೇರಿದಂತೆ ರೈತರು ಆರೋಪಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.