ಮಡಿಕೇರಿ, ಜು. 20: ಸತತ ಮೂರು ವರ್ಷಗಳಿಂದ ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದ ವೀರಾಜಪೇಟೆ ತಾಲೂಕು (ದಕ್ಷಿಣ ಕೊಡಗು) ನಿರೀಕ್ಷಿಸದ ರೀತಿಯಲ್ಲಿ ಕಳೆದ ಒಂದೆರಡು ದಿನ ಕೊಡಗಿನ ಈ ಹಿಂದಿನ ನೈಜ ಮಳೆಗಾಲದ ಚಿತ್ರಣವನ್ನು ಕಂಡಿರುವದು ಅಚ್ಚರಿ ಮೂಡಿಸಿದೆ. ಒಂದೆರಡು ದಿನ ಧಾರಾಕಾರವಾಗಿ ಸುರಿದ ಮಳೆ ತಾಲೂಕಿನ ಚಿತ್ರಣವನ್ನೇ ಬುಡಮೇಲು ಮಾಡಿದೆ. ಪೆರುಂಬಾಡಿ ಬಳಿ ರಸ್ತೆ ಕುಸಿತಗೊಂಡಿದ್ದು, ಕೊಡಗು - ಕೇರಳ ರಸ್ತೆ ಸಂಪರ್ಕ ಕಡಿತಗೊಂಡಿರುವ ಗಂಭೀರ ಘಟನೆ ನಡೆದಿದೆ.ಇದು ನಿಜವೋ.., ಕನಸೋ.., ಎಂಬಂತೆ ತಾ. 20ರ ದಿನದ ವಾತಾವರಣ ಮತ್ತೆ ಭಾಸ್ಕರನ ದರ್ಶನದೊಂದಿಗೆ ಮುಂದೇನಾಗಬಹುದು ಎಂಬ ಆತಂಕ - ಕುತೂಹಲ ಸೃಷ್ಟಿಸುವಂತೆ ಮಾಡಿದೆ. ವಾತಾವರಣದ ಏರುಪೇರನ್ನು ಯಾರೂ ಅಲಗಳೆಯುವಂತಿಲ್ಲ ಎಂಬಂತಿದೆ ಪ್ರಸ್ತುತದ ದಿನಗಳು. ನಿನ್ನೆ ಧಾರಾಕಾರ ಮಳೆ, ಗಾಳಿ, ಚಳಿ ಇದ್ದರೆ ಇಂದು ಬಿಸಿಲಿನ ವಾತಾವರಣದ ಸನ್ನಿವೇಶ... ಇದು ಒತ್ತಟ್ಟಿಗಿರಲಿ. ತಾಲೂಕಿನಲ್ಲಿ ಮಳೆಯಿಂದ ಉಂಟಾಗಿದ್ದ ಪರಿಸ್ಥಿತಿಯ ಚಿತ್ರಣ ಇಂತಿದೆ.

ವೀರಾಜಪೇಟೆ

ಕಳೆದ ಮೂರು ದಿನಗಳಿಂದ ಕೊಡಗು ಕೇರಳ ಗಡಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಪೆರುಂಬಾಡಿ ಬಳಿ ಅಂತರರಾಜ್ಯವನ್ನು ಸಂಪರ್ಕಿಸುವ ಹೆದ್ದಾರಿ ರಸ್ತೆ ಕುಸಿದಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇಂದು ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ದುರಂತ ಸಂಭವಿಸಿದೆ.

ಕರ್ನಾಟಕ ಹಾಗೂ ಕೇರಳ ರಾಜ್ಯದ ಸಂಪರ್ಕವನ್ನು ಬೆಸೆಯುವ ರಾಜ್ಯ ಹೆದ್ದಾರಿಯಾಗಿದ್ದು ಪ್ರತಿದಿನ 2800 ರಿಂದ 3000 ಸಾವಿರ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಪೆರುಂಬಾಡಿ ಕೆರೆಯ ಮೇಲ್ಭಾಗದಲ್ಲಿ ಮಾಕುಟ್ಟ ಅರಣ್ಯ ಪ್ರದೇಶವಿದ್ದು ಅರಣ್ಯದಿಂದ ಬರುವ ಮಳೆಯ ನೀರು ಹರಿದು ಕೆರೆಯನ್ನು ಪ್ರವೇಶಿಸುವುದರಿಂದ ಕೆರೆಯ ಹೆದ್ದಾರಿ ರಸ್ತೆ ಭಾಗದ ದಡ ಕುಸಿದು ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಹೊಂಡವಾಗಿರುವುದರಿಂದ ರಸ್ತೆಯೇ ಪೂರ್ಣವಾಗಿ ಕುಸಿದಿದ್ದು, ಸಂಚಾರಕ್ಕೆ ಪೂರ್ಣ ಅಡಚಣೆ ಉಂಟಾಗಿದೆ. ರಸ್ತೆಯ ಒಂದು ಬದಿಯಲ್ಲಿ 30ಕ್ಕೂ ಅಧಿಕ ಅಡಿಗಳಷ್ಟು ಆಳವಿದ್ದು ಇದರಿಂದ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಕೆರೆಯ ಬದಿಯಲ್ಲಿಯೂ ಭಾರೀ ಹೊಂಡವಾಗಿದ್ದು ಇದು ಸುಮಾರು 15 ಅಡಿಗಳಿಗೂ ಅಧಿಕ ಆಳವಾಗಿದೆ. ಇದನ್ನು ದುರಸ್ತಿಪಡಿಸಲು 45ದಿನಗಳಾದರೂ ಕಾಲವಕಾಶ ಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೆದ್ದಾರಿ ರಸ್ತೆ ದುರಸ್ತಿಯಾಗುವ ತನಕ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಿಲ್ಲದರಿಂದ ಕೇರಳದ

(ಮೊದಲ ಪುಟದಿಂದ) ಕಣ್ಣಾನೂರು ತಲಚೇರಿ ಕೂಟುಪೊಳೆ ಇರಿಟ್ಟಿ ಮಾಕುಟ್ಟ ವಿವಿಧೆಡೆಗಳಿಗೆ ತೆರಳಲು ಕುಟ್ಟ ಮಾನಂದವಾಡಿ ಮಾರ್ಗದ ಬದಲಿ ರಸ್ತೆಯನ್ನು ಬಳಸಬೇಕಾಗಿದೆ.

ಸ್ಥಳದಲ್ಲಿ ಪೋಲಿಸ್, ಕಂದಾಯ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ರಸ್ತೆ ದುರಂತದ ಸ್ಥಳಕ್ಕೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ ಗಣೇಶ್, ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ ಗಿರೀಶ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಆರ್.ಎಂ.ಸಿ. ಸದಸ್ಯ ಮಾಳೇಟಿರ ಬೋಪಣ್ಣ, ಸರ್ಕಲ್ ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ ಭೇಟಿ ನೀಡಿದರು.

ರಸ್ತೆ ಮೇಲೆ ನೀರು ಸಂಚಾರ ಬಂದ್

ಕರ್ನಾಟಕ ಹಾಗೂ ಕೇರಳ ರಾಜ್ಯದ ಸಂಪರ್ಕ ರಸ್ತೆಯಾದ ಆರ್ಜಿ ಗ್ರಾಮದಲ್ಲಿ ರಸ್ತೆಯ ಮೇಲೆ 2 ಅಡಿ ನೀರು ಹರಿದು ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಆರ್ಜಿ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕೃಷಿ ಭೂಮಿಯಲ್ಲಿ ಅನ್ವರುಲ್ ಹುದಾ ಸಂಸ್ಥೆಯ ವಿದ್ಯಾಕೇಂದ್ರ, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದ ಕಾರಣ ನೀರು ಸರಾಗವಾಗಿ ತೋಡಿನಲ್ಲಿ ಹರಿಯದೆ ನೀರು ರಸ್ತೆಯ ಮೇಲೆ ಹರಿದು ಹೆದ್ದಾರಿ ರಸ್ತೆ ಸಂಚಾರಕ್ಕೆ ಇಂದು ವ್ಯತ್ಯಯ ಉಂಟಾಯಿತು.

`ಸÀ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಮಾತನಾಡಿ ಕೃಷಿ ಭೂಮಿಯಲ್ಲಿ ಸರ್ಕಾರದ ಕಾನೂನನ್ನು ಉಲ್ಲಂಘಿಸಿ ಗ್ರಾಮಸ್ತರ ವಿರೋಧದ ನಡುವೆ ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಉಚ್ಚನ್ಯಾಯಲಯ ನೀರು ಸರಾಗವಾಗಿ ಹರಿಯಲು ತೊಂದರೆಯಾಗದ ರೀತಿಯಲ್ಲಿ ಪಿಲ್ಲರ್‍ಗಳ ಮೇಲೆ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಿದೆಯಾದರೂ ವಿದ್ಯಾಸಂಸ್ಥೆಗಳ ಆಡಳಿತ ನ್ಯಾಯಾಲಯದ ಆದೇಶವನ್ನು ದಿಕ್ಕರಿಸಿ ಕಟ್ಟಡ ನಿರ್ಮಾಣ ಮಾಡಿದ ಕಾರಣ ರಾಜ್ಯ ಹೆದ್ದಾರಿಗೆ ಹಾನಿ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ರಸ್ತೆ ದುರಂತದ ಸ್ಥಳದಲ್ಲಿಯೇ ಇದ್ದ ಕಾಂಗ್ರೆಸ್ ಪಕ್ಷದ ಅಬ್ದುಲ್ ಸಲಾಂ ಮಾತನಾಡಿ ರಾಜ್ಯ ಹೆದ್ದಾರಿ ರಸ್ತೆ ಬದಿ ಕುಸಿದು ಅಂತರರಾಜ್ಯ ರಸ್ತೆ ಸಂಪರ್ಕ ಬಂದ್ ಆಗಿರುವದನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸೀತಾರಾಂ ಅವರ ಗಮನಕ್ಕೆ ತರಲಾಗಿದ್ದು ರಸ್ತೆ ದುರಸ್ತಿಗೆ ತಕ್ಷಣ ಹಣ ಬಿಡುಗಡೆ ಮಾಡಲಾಗುವದು. ಇಲಾಖೆಯ ಅಧಿಕಾರಿಗಳಿಗೆ ಅಂದಾಜು ವೆಚ್ಚ ಪಟ್ಟಿ ತಯಾರಿಸಲು ತುರ್ತು ಆದೇಶ ನೀಡಲಾಗಿದೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

24 ಗಂಟೆಯಲ್ಲಿ ಆರು ಇಂಚು ಮಳೆ

ಮೊದಲ ವಾರದಿಂದಲೇ ಕುಂಠಿತಗೊಂಡಿದ್ದ ಮಳೆ ಈಗ 4 ದಿನಗಳಿಂದ ಈ ವಿಭಾಗಕ್ಕೆ ಧಾರಾಕಾರ ಮಳೆ ಸುರಿಯುತ್ತಿದ್ದು ನಿನ್ನೆ ದಿನ ಬೆಳಗಿನ 8 ಗಂಟೆಯಿಂದ ಇಂದು 8ಗಂಟೆಯವರೆಗೆ ವೀರಾಜಪೇಟೆ ವಿಭಾಗಕ್ಕೆ 155.4 ಮಿ.ಮೀ (6.3 ಇಂಚುಗಳಷ್ಟು) ಮಳೆ ಸುರಿದು ದಿನ ನಿತ್ಯದ ಮಳೆ ಪ್ರಮಾಣದಲ್ಲಿ ಈ ವರ್ಷ ದಾಖಲೆ ನಿರ್ಮಿಸಿದೆ.

ಈಚೆಗಿನ ಮಳೆಗೆ ಈ ವಿಭಾಗದ ಹೊಳೆ, ಕೆರೆ, ಬಾವಿ, ತೋಡುಗಳು ಭರ್ತಿಯಾಗುವ ಹಂತ ತಲುಪಿದ್ದು ಕದನೂರು, ಕೆದಮುಳ್ಳೂರು, ಕಡಂಗ, ಆರ್ಜಿ, ಪೆರುಂಬಾಡಿ ಸೇರಿದಂತೆ ಗದ್ದೆಗಳು ಜಲಾವೃತಗೊಂಡಿದೆ. ಬೇತರಿ ಗ್ರಾಮದ ಕಾವೇರಿ ಹೊಳೆ ನಿನ್ನೆಕ್ಕಿಂತಲೂ ಇಂದು ಬೆಳಗಿನ ವೇಳೆಗೆ ಮೂರು ಅಡಿಗಳಷ್ಟು ಏರಿಕೆಯನ್ನು ಕಂಡಿದೆ ಎಂದು ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೀರಾಜಪೇಟೆ ವಿಭಾಗಕ್ಕೆ ತಾ:17ರಂದು 6.4 ಮಿ.ಮೀ, 18ರಂದು 12.4ಮಿ.ಮೀ ತಾ:19ರಂದು 28.4 ಮಿ.ಮೀ ಮಳೆ ಸುರಿದಿದೆ. ಇಂದು ಬೆಳಿಗ್ಗೆ ರಭಸದಿಂದ ಮಳೆ ಸುರಿದಿದ್ದರೂ ಅಪರಾಹ್ನ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿತ್ತು.

ಶ್ರೀಮಂಗಲ

ದ.ಕೊಡಗಿನ ಹುದಿಕೇರಿ,ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿಗೇರಿ, ಕುಟ್ಟ, ಬಲ್ಯಮಂಡೂರು, ಕಾನೂರು, ಬಾಳೆಲೆ ಭಾಗಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ನದಿ, ಹೊಳೆ, ತೋಡುಗಳು ತುಂಬಿ ಹರಿಯುತ್ತಿದೆ.

ಪಶ್ಚಿಮ ಘಟ್ಟದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿಯ ಉಪನದಿಯಾದ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ಕಳೆದ 48 ಗಂಟೆಯಿಂದ 250 ಮಿ.ಮೀ ಗೂ ಹೆಚ್ಚು ಮಳೆ ಸುರಿದಿದ್ದು, ಪ್ರಸಕ್ತ ಮುಂಗಾರು ಅವಧಿಯಲ್ಲಿ ಇದೇ ಮೊದಲ ಬಾರಿಗೆ ನದಿಯ ನೀರಿನ ಮಟ್ಟ ಅತಿ ಹೆಚ್ಚು ಏರಿಕೆಯಾಗಿದೆ.

ಬಿರುನಾಣಿಯಲ್ಲಿ ಹುಟ್ಟಿ ಹರಿಯುವ ಕಕ್ಕಟ್ಟು ನದಿ ಸಹ ತುಂಬಿ ಹರಿಯುತ್ತಿದ್ದು, ಈ ವ್ಯಾಪ್ತಿಯಲ್ಲಿ ಕಳೆದ 48 ಗಂಟೆಯಲ್ಲಿ 375 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.ಹುದಿಕೇರಿ ಗ್ರಾ.ಪಂ. ವ್ಯಾಪಿಯ ಬೇಗೂರು ಕೊಲ್ಲಿಯ ನೂರಾರು ಏಕರೆ ಭತ್ತದ ಗದ್ದೆ ಜಲಾವೃತವಾಗಿದ್ದು, ಇದರಿಂದ ಗದ್ದೆಯನ್ನು ಉಳುಮೆ ಮಾಡಲು ಹಾಗೂ ನಾಟಿ ಕಾರ್ಯ ಸಿದ್ದತೆಗೆ ತಡೆಯಾಗಿದೆ.

ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಾಳೆಲೆ-ನಿಟ್ಟೂರು ಸೇತುವೆ ಮೇಲ್ಭಾಗ ನೀರು ನಿಂತು ಸಂಚಾರ ಸ್ಥಗಿತಗೊಳಿಸಲಾಗಿದೆ.

ಹಳ್ಳಿಗಟ್ಟು-ಪೊನ್ನಂಪೇಟೆ ಭಾಗದಲ್ಲಿ ಹೆಚ್ಚು ಮಳೆ ಕಾಣಿಸಿಕೊಂಡಿದ್ದು, ಕುಂದ-ಬಿ. ಶೆಟ್ಟಿಗೇರಿ ಕೆಂದರೆಕಾಡ್ ಸಂಪರ್ಕ ಸೇತುವೆ ಮೇಲೆ ಸುಮಾರು 2 ಅಡಿ ನೀರು ಹರಿಯುತ್ತಿದೆ. ಹಳ್ಳಿಗಟ್ಟು ನಿನಾದ ಶಾಲೆಯ ಸಮೀಪದ ಗದ್ದೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಮಳೆ-ಗಾಳಿಗೆ ಮರಗಳು ನೆಲಕ್ಕುರುಳಿದೆ. ದ.ಕೊಡಗಿನ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಹಾಗೂ ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿ ಹಾಗೂ ಕಂಬಗಳು ಹಾನಿಯಾಗಿದ್ದು, ದ.ಕೊಡಗಿನ ಬಹುತೇಕ ಗ್ರಾಮೀಣ ಭಾಗಗಳು ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲದೆ ಕಾರ್ಗತ್ತಿನಲ್ಲಿ ಮುಳುಗಿದೆ. 4 ದಿನದಿಂದ ವಿದ್ಯುತ್ ಇಲ್ಲದ ಕಾರಣ ಗ್ರಾಮೀಣ ಭಾಗದ ಜನತೆ ಮೊಬೈಲ್ ಪೋನ್‍ಗಳು ಸ್ವಿಚ್ ಆಫ್ ಆಗಿ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ತೊಂದರೆಯಾಗಿದ್ದು, ಮತ್ತೊಂದೆಡೆ ವಿದ್ಯುತ್ ಕಡಿತದಿಂದ ಹೊರಜಗತ್ತಿನ ಸಂಪರ್ಕ ಇಲ್ಲದಂತಾಗಿದೆ. ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಪೊನ್ನಂಪೇಟೆ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಅಡಚಣೆಯಾಗಿದ್ದ 33 ಕೆ.ವಿ ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ. ಶ್ರೀಮಂಗಲ ಉಪಕೇಂದ್ರದಿಂದ ಬಿರುನಾಣಿ. ಟಿ..ಶೆಟ್ಟಿಗೇರಿ, ಬಲ್ಯಮಂಡೂರು, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ಭಾಗಗಳಿಗೆ ಮುಖ್ಯ ಸಂಪರ್ಕ ನೀಡುವ 11 ಕೆ.ವಿ. ವಿದ್ಯುತ್ ಮಾರ್ಗವನ್ನು ದುರಸ್ಥಿ ಮಾಡಲಾಗುತ್ತಿದೆ. ಶ್ರೀಮಂಗಲ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಪ್ರದೇಶದಲ್ಲಿ ಮಳೆ, ಗಾಳಿಗೆ ಸುಮಾರು 28 ವಿದ್ಯುತ್ ಕಂಬಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಶ್ರೀಮಂಗಲ ಸೆಸ್ಕ್ ಎಂಜಿನಿಯರ್ ಸೋಮಶೇಖರ್ ತಿಳಿಸಿದ್ದಾರೆ.

*ಗೋಣಿಕೊಪ್ಪಲು

ಗಂಜಿಕೇಂದ್ರಕ್ಕೆ ಸಿದ್ಧತೆ

ದ.ಕೊಡಗಿನ ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ ಭಾಗಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ನದಿ, ಹೊಳೆ, ತೋಡುಗಳು ತುಂಬಿ ಹರಿಯುತ್ತಿದೆ. ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಾಳೆಲೆ-ನಿಟ್ಟೂರು ಸೇತುವೆ ಮೇಲ್ಭಾಗ ನೀರು ನಿಂತು ಸಂಚಾರ ಸ್ಥಗಿತಗೊಳಿಸಲಾಗಿದೆ. ಗೋಣಿಕೊಪ್ಪ ಕೀರೆ ಹೊಳೆ ತುಂಬಿ ಹರಿಯುತ್ತಿದ್ದು, ಸೇತುವೆ ಮೇಲೆ ನೀರು ಹರಿಯುವ ಸೂಚನೆ ಕಂಡುಬಂದಿದ್ದು, 2ನೇ ವಿಭಾಗದ ನಿವಾಸಿಗಳಿಗೆ ನೆರೆ ಆತಂಕ ಎದುರಾಗಿದೆ. ಪಂಚಾಯ್ತಿ ಮುಂಜಾಗೃತ ಕ್ರಮ ಕೈಗೊಂಡಿದ್ದು, ಗಂಜಿ ಕೇಂದ್ರ ತೆರೆಯಲು ಕ್ರಮಕ್ಕೆ ಸಿದ್ದತೆ ನಡೆಸಿದೆ. ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಬಾಲಾಜಿ ಗ್ರಾಮದ ಕೀರೆ ಹೊಳೆ ರಭಸದಿಂದ ತುಂಬಿ ಹರಿಯುತ್ತಿದೆ.

ಪಾಲಿಬೆಟ್ಟ, ತಿತಿಮತಿ ಭಾಗಗಳಲ್ಲಿ ಅಧಿಕ ಮಳೆ ಕಂಡುಬಂದಿದ್ದು, ಗೋಣಿಕೊಪ್ಪ ಕಾವೇರಿ ಹಿಲ್ಸ್ ಬಡಾವಣೆಯ ನಿವಾಸಿ ಶಕೀರ್ ಎಂಬುವವರ ಮನೆಯ ತಡೆಗೋಡೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಮಳೆ. ಗಾಳಿಗೆ ಮರಗಳು ನೆಲಕ್ಕುರುಳಿದೆ. ದ.ಕೊಡಗಿನ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಹಾಗೂ ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ತಂತಿ ಹಾಗೂ ಕಂಬಗಳು ಹಾನಿಯಾಗಿದೆ.

ಹಳ್ಳಿಗಟ್ಟು

ಮಳೆಯ ಆರ್ಭಟ ತುಂಬಿ ಹರಿದ ಹೊಳೆ ತೋಡು

ಸೇತುವೆ ಸಂಪರ್ಕ ಕಡಿತ.. ಜನಜೀವನ ಅಸ್ತವ್ಯಸ್ಥಗೊಂಡಿದೆ. ಕುಂದ ಕೈಮುಡಿಕೆ ಸಮೀಪದ ಬಿ.ಶೆಟ್ಟಿಗೇರಿ ಸಂಪರ್ಕ ಸೇತುವೆ ಮೇಲೆ ಸುಮಾರು ಎರಡು ಅಡಿ ನೀರು ಕಾಣಿಸಿಕೊಂಡಿದ್ದು ವಾಹನ ಸಂಪರ್ಕ ಕಡಿತಗೊಂಡಿದೆ.

ಹಳ್ಳಿಗಟ್ಟು ನಿನಾಧ ಶಾಲೆಯ ಬಳಿಯ ಗದ್ದೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ವಾಹನ ಸವಾರರು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಹೊಳೆ ತೋಡುಗಳ ನೀರು ಗದ್ದೆಯನ್ನು ಆವರಿಸಿಕೊಂಡಿದೆ.

ಸಿದ್ದಾಪುರ

ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಗಾಳಿ,ಮಳೆಗೆ ನೆಲ್ಯಹುದಿಕೇರಿ ಸರಕಾರಿ ಪಧವಿ ಪೂರ್ವ ಕಾಲೇಜಿನ ಮೇಲ್ಛಾವಣಿ ಹಾರಿ ಹೋಗಿದ್ದು ,ಕಾಲೇಜಿಗೆ ರಜೆ ಇದ್ದ ಕಾರಣ ಸಂಭವಿಸಬಹುದಾದ ಬಾರೀ ಅನಾಹುತ ತಪ್ಪಿದೆ. ಇದಲ್ಲದೇ ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುಂಡಿಯ ಬಳಿ ವಿದ್ಯುತ್ ತಂತಿಯ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿದ್ದು ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.