ಮಡಿಕೇರಿ, ಜು. 21: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಪಕ ನಷ್ಟ ಸಂಭವಿಸಿದ್ದು, ಜನಜೀವನಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಕನಿಷ್ಟ ರೂ. 10 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿರುವ ಬೋಪಯ್ಯ ಅವರು ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಮಾಡಲು ತಕ್ಷಣ ಸಂಬಂಧಪಟ್ಟವರಿಗೆ ಸೂಚನೆ

(ಮೊದಲ ಪುಟದಿಂದ) ನೀಡಬೇಕೆಂದು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಮಳೆಯಿಂದಾಗಿ ವೀರಾಜಪೇಟೆ ತಾಲೂಕಿನ ಪೆರಂಬಾಡಿ ಬಳಿಯ ಕೊಣನೂರು - ಮಾಕುಟ್ಟ ಅಂತರರಾಜ್ಯ ಹೆದ್ದಾರಿಯು ಸಂಪೂರ್ಣ ಕುಸಿದಿದೆ. ಭಾಗಮಂಡಲ - ತಲಕಾವೇರಿ ರಸ್ತೆಯ ಎರಡು ಸ್ಥಳಗಳಲ್ಲಿ ಗುಡ್ಡ ಕುಸಿದಿದೆ. ಇದೇ ರೀತಿ ಜಿಲ್ಲೆಯಲ್ಲಿ ಹಲವು ರಸ್ತೆಗಳು ಕುಸಿದು ಬಿದ್ದಿರುವ ಪರಿಣಾಮ ಕೆಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಳೆದುಕೊಂಡು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದು ಹೋಗಿರುವದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು, ಜನರು ವಸತಿಹೀನರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕುಸಿದಿರುವ ರಸ್ತೆಗಳ ತುರ್ತು ದುರುಸ್ತಿ ಹಾಗೂ ಕುಸಿದಿರುವ ಮನೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅಗತ್ಯವಿದದ್ದು, ಇದಕ್ಕಾಗಿ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಕನಿಷ್ಟ ರೂ. 10 ಕೋಟಿಗಳನ್ನು ತಕ್ಷಣ ಬಿಡುಗಡೆ ಮಾಡಲು ಸಂಬಂಧಪಟ್ಟವರಿಗೆ ಅಗತ್ಯ ಸೂಚನೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.