ಮಡಿಕೇರಿ, ಜು. 20: ಸರಕಾರದ ವಿವಿಧ ಸೌಲಭ್ಯಗಳನ್ನು ಮಹಿಳೆಯರು ಮತ್ತು ಮಕ್ಕಳಿಗೆ ತಲಪಿಸುವಂತೆ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎನ್.ಎ. ಹ್ಯಾರೀಸ್ ನಿರ್ದೇಶನ ನೀಡಿದ್ದಾರೆ.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಅಭಿವೃದ್ಧಿ, ರಕ್ಷಣೆ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಸರಕಾರ ಹಮ್ಮಿಕೊಂಡಿರುವ, ಅನುಷ್ಠಾನಗೊಳಿಸಿರುವ ಹಲವು ಯೋಜನೆಗಳು, ಕಾರ್ಯಕ್ರಮ, ಜಾಗೃತಿ ಶಿಬಿರ ಹಾಗೂ ಇನ್ನಿತರ ಯೋಜನೆಗಳ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಕ್ಷಮದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳನ್ನು ತಲಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್.ಎ. ಹ್ಯಾರೀಸ್ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳು ಸೇರಿದಂತೆ ಗರ್ಭೀಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ತಲುಪಿಸಬೇಕು. ಅಪೌಷ್ಠಿಕ ಮಕ್ಕಳು ಸಾಮಾನ್ಯ ಮಕ್ಕಳಂತೆ ಆಗಲು ವಿಶೇಷ ಗಮನಹರಿಸಬೇಕು. ಭವಿಷ್ಯದ ಯುವ ಜನರನ್ನು ರಕ್ಷಿಸಬೇಕು ಎಂದು ಸೂಚನೆ ನೀಡಿದರು.

(ಮೊದಲ ಪುಟದಿಂದ) ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಗಿರಿಜನ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಹಾಯಧನ ಕಲ್ಪಿಸಲು ಸರ್ಕಾರ 21 ಲಕ್ಷ ರೂ.ಬಿಡುಗಡೆ ಮಾಡಿದ್ದು, ಈ ಹಣ ಖರ್ಚು ಮಾಡದಿರುವದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಸರ್ಕಾರ ಹಣ ಬಿಡುಗಡೆ ಮಾಡಿರುವದು ಏಕೆ ಎಂದು ಪ್ರಶ್ನಿಸಿದ ಸಮಿತಿ ಅಧ್ಯಕ್ಷರು, ಅರ್ಹರಿಂದ ಜಾತಿ ಪ್ರಮಾಣಪತ್ರ ಇಲ್ಲದಿದ್ದಲ್ಲಿ ಕಂದಾಯ ಇಲಾಖೆ ಗಮನಕ್ಕೆ ತಂದು ಜಾತಿ ಪ್ರಮಾಣಪತ್ರ ಪಡೆಯಲು ಅನುವು ಮಾಡಬೇಕು. ಅದನ್ನು ಬಿಟ್ಟು ಹಣ ಖರ್ಚು ಮಾಡದಿದ್ದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾತಿ ಪ್ರಮಾಣ ಪತ್ರ ಒದಗಿಸಲು ಕಾಲಮಿತಿಯಿದ್ದು, ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು.

ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಗುಂಪುಗಳ ಸಂಖ್ಯೆ ಕಡಿಮೆ ಇದ್ದು, ಸ್ತ್ರೀಶಕ್ತಿ ಗುಂಪುಗಳನ್ನು ಹೆಚ್ಚಿಸಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವಂತಾಗಲು ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಸಿಬ್ಬಂದಿಗಳ ಕೊರತೆ ಇದೆ ಎಂದು ಸಬೂಬು ಹೇಳುವದು ಸರಿಯಲ್ಲ. ಸಿಬ್ಬಂದಿಗಳ ಕೊರತೆ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ.

ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಮತ್ತು ಉಪ ನಿರ್ದೇಶಕರು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಷ್ಟು ಅಂಗನವಾಡಿಗಳಿವೆ, ಅಂಗನವಾಡಿಗಳಲ್ಲಿ ಎಷ್ಟು ಮಕ್ಕಳಿದ್ದಾರೆ, ಮತ್ತಿತರ ಮಾಹಿತಿ ಪಡೆದ ಸಮಿತಿ ಅಧ್ಯಕ್ಷರು 19 ಸಾವಿರ ಅಂಗನವಾಡಿ ಮಕ್ಕಳ ಅಂಕಿ ಅಂಶ ಸಂಬಂಧ ನಿಖರ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಹಾಗೂ ಕಾರ್ಮಿಕ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಕೂಲಿ ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕಿದೆ.

ಜಿಲ್ಲೆಯ ಅಂಗನವಾಡಿಗಳಿಗೆ ಬಡ ಮಕ್ಕಳು ತೆರಳುತ್ತಿದ್ದಾರೆ. ಈ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ವೆಟರ್ ನೀಡಬೇಕು. ಚಳಿ, ಮಳೆ, ಗಾಳಿ ಹೆಚ್ಚಿರುವದರಿಂದ ಅಂಗನವಾಡಿ ಮಕ್ಕಳಿಗೆ ಈ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಎನ್.ಎ. ಹ್ಯಾರೀಸ್ ಅವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು.

ಸಮಿತಿ ಸದಸ್ಯ ಸುಧಾಕರ್ ರಾವ್ ಮಾತನಾಡಿ ದಿಡ್ಡಳ್ಳಿಯ ಗಿರಿಜನರಿಗೆ ಪುನರ್ ವಸತಿ ಒದಗಿಸಲಾಗಿರುವ ಬಸವನಹಳ್ಳಿ, ಬ್ಯಾಡಗೊಟ್ಟ ಪುನರ್ ವಸತಿ ಕೇಂದ್ರದಲ್ಲಿ ಅಂಗನವಾಡಿ ತೆರೆಯಲು ಮುಂದಾಗುವಂತೆ ಸಲಹೆ ಮಾಡಿದರು.

ಸಮಿತಿ ಉಪ ಕಾರ್ಯದರ್ಶಿ ಆಜಾದ್ ಅಹಮ್ಮದ್ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಚೋಳನ ದೀಪಾ, ವಿಕಲಚೇತನರ ಇಲಾಖೆ ನಿರ್ದೇಶಕ ಸಿದ್ದರಾಜು, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಹಲವು ಮಾಹಿತಿ ನೀಡಿದರು.

ಪಾಲಿಬೆಟ್ಟದ ಚೆಶೈರ್ ಹೋಂನ ಮುತ್ತಣ್ಣ ಮಾತನಾಡಿ ನಿರ್ಗತಿಕ ಮಕ್ಕಳಿಗಾಗಿ ಸಂಸ್ಥೆಯನ್ನು ನಡೆಸುತ್ತಿದ್ದು, ಈ ಸಂಸ್ಥೆಗೆ ಮಧ್ಯಾಹ್ನದ ಊಟಕ್ಕಾಗಿ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿ ಅಧ್ಯಕ್ಷರು ನಿರ್ದೇಶನ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್ ಜಿಲ್ಲೆಯಲ್ಲಿ 871 ಅಂಗನವಾಡಿಗಳಿದ್ದು, 6 ತಿಂಗಳಿಂದ ಮೂರು ವರ್ಷದೊಳಗಿನ 19,314 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದು, ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 133 ಅಪೌಷ್ಟಿಕ ಮಕ್ಕಳಿದ್ದು, ಈ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಅಗತ್ಯ ಉಪಚಾರವನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಸುಮಾರು 3,985 ಬಾಣಂತಿಯರು, 4,442 ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 1,152 ಸ್ತ್ರೀಶಕ್ತಿ ಗುಂಪುಗಳಿದ್ದು, 18 ಸಾವಿರ ಮಂದಿ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು. ಸಿಡಿಪಿಒ ದಮಯಂತಿ ಸೇರಿದಂತೆ ಇತರರು ಹಲವು ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಸಮಿತಿ ಸದಸ್ಯರಾದ ಅಪ್ಪಾಜಿ ಗೌಡ, ಜಯಮ್ಮ, ಲೆಹರ್‍ಸಿಂಗ್, ಸರೋಜ, ಎಂ.ಎಂ. ಆಶಾ ಹಾಜರಿದ್ದರು.