ಮಡಿಕೇರಿ, ಜು. 22: ಮೈಸೂರಿನಲ್ಲಿ ಶಿಕ್ಷಕಿಯಾಗಿದ್ದ ಕೊಡಗಿನ ಮಹಿಳೆಯೋರ್ವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆಗೈದಿರುವ ಶಂಕೆ ವ್ಯಕ್ತಗೊಂಡಿದೆ. ಮೃತರ ಕುಟುಂಬದವರು ನೀಡಿದ ದೂರಿನಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಮೂಲತಃ ಕುಟ್ಟ ಗ್ರಾಮದ ಕಾಫಿ ಬೆಳೆಗಾರ ಪೆಮ್ಮಂಡ ಪಿ. ಸುಬ್ರಮಣಿ ಎಂಬವರ ಪುತ್ರಿ ಸುಜಯ (33) ಮೃತಪಟ್ಟಿರುವ ಮಹಿಳೆ ಮೈಸೂರಿನ ಹೆಬ್ಬಾಳ 2ನೇ ಹಂತದಲ್ಲಿ ಈ ಘಟನೆ ನಡೆದಿದೆ.ಕಳೆದ 10 ವರ್ಷಗಳ ಹಿಂದೆ ಸುಜಯ ಮೂಲತಃ ಗಾಳಿಬೀಡುವಿನ ನಿವಾಸಿ ಮೈಸೂರಿನಲ್ಲಿ ನೆಲೆಸಿರುವ ಪಾಂಡೀರ ಪವಿನ್ ತಿಮ್ಮಯ್ಯ ಎಂಬಾತನನ್ನು ವಿವಾಹವಾಗಿ ಮೈಸೂರಿನಲ್ಲಿ ನೆಲೆಸಿದ್ದರು. ಆರಂಭದಲ್ಲಷ್ಟೆ ಇವರು ಅನ್ಯೋನ್ಯವಾಗಿದ್ದರೆನ್ನಲಾಗಿದ್ದು, ಬಳಿಕ ಪತಿ ಹಿಂಸೆ ನೀಡುತ್ತಿದ್ದುದಾಗಿ ಕುಟುಂಬದವರು ಹೇಳುತ್ತಾರೆ. ಮೈಸೂರಿನಲ್ಲಿದ್ದ ಸ್ವಂತ ಮನೆ, ನಿವೇಶನವನ್ನು ಹಲವು ಚಟಕ್ಕೆ ದಾಸನಾಗಿದ್ದ ಈತ ಮಾರಾಟ ಮಾಡಿದ್ದು, ಯಾವದೇ ಕೆಲಸಕ್ಕೂ ತೆರಳುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಜಯ ಅಲ್ಲಿನ ಯೂರೋ ಕಿಡ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಬದುಕು ಸಾಗಿಸುತ್ತಿದ್ದರು. ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ ಈತ ಪತ್ನಿಗೆ ಕಿರುಕುಳ ನೀಡುತ್ತಿದ್ದುದು ಮಾತ್ರವಲ್ಲದೆ ಕೆಲವೊಮ್ಮೆ ಸ್ನೇಹಿತರನ್ನು ಕರೆತಂದು ಮುಜುಗರ ಉಂಟುಮಾಡುತ್ತಿದ್ದ ಎಂದು ಮೃತರ ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಈಕೆಯನ್ನು ತವರಿಗೆ ಮರಳುವಂತೆಯೂ ಹೇಳಲಾಗಿತ್ತು.

ನಿನ್ನೆ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಪವಿನ್ ಪತ್ನಿಯನ್ನು ಬೃಂದಾವನ ಆಸ್ಪತ್ರೆಗೆ ಕೊಂಡೊಯ್ದಿದ್ದು ಆತ್ಮಹತ್ಯೆಗೆ ಯತ್ನಿಸಿರುವದಾಗಿ ಹೇಳಿಕೊಂಡಿದ್ದಾನೆ. ಆದರೆ ಆ ವೇಳೆಗಾಗಲೇ ಆಕೆ ಸಾವನ್ನಪ್ಪಿದ್ದರು. ಕತ್ತಿನ ಭಾಗದಲ್ಲಿ ಗಾಯವಿದ್ದುದನ್ನು ಗಮನಿಸಿ ಆಸ್ಪತ್ರೆಯವರು ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಮುನ್ನ ಮೈಸೂರಿನಲ್ಲೇ ಉದ್ಯೋಗದಲ್ಲಿರುವ ಸುಜಯ ಅವರ ಸಹೋದರಿ ಸುಮನ ಅವರಿಗೆ ಕರೆ ಮಾಡಿರುವ ಪವಿನ್ ಅನಾರೋಗ್ಯದಿಂದ ಪತ್ನಿಯನ್ನು ಆಸ್ಪತ್ರೆಗೆ ಕರೆ ತಂದಿರುವದಾಗಿ ಹೇಳಿದ್ದು, ಮತ್ತೆ 10 ನಿಮಿಷದಲ್ಲಿ ಕರೆಮಾಡಿ ಸುಜಯ ಮೃತಪಟ್ಟಿರುವದಾಗಿ ತಿಳಿಸಿದ್ದಾನೆ. ಕುತ್ತಿಗೆ, ತಲೆ, ಕಾಲಿನ ಭಾಗದಲ್ಲಿ ಗಾಯವಾಗಿರುವದು ಹಾಗೂ ಮೂಗಿನಿಂದ ರಕ್ತ ಬರುತ್ತಿದ್ದುದನ್ನು ಗಮನಿಸಿರುವ ಸುಮನ ಕೂಡ ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಆರೋಪಿ ಪವಿನ್ ಆಗಾಗ್ಗೆ ಮಾತು ಬದಲಿಸುವ ಮೂಲಕ ಮತ್ತಷ್ಟು ಸಂಶಯ ಮೂಡಿಸುವಂತೆ ವರ್ತಿಸಿದ್ದಾನೆ. ಈ ಕುರಿತು ಮೃತೆಯ ಸಹೋದರ ಪೆಮ್ಮಂಡ ಎಸ್. ಕಾವೇರಪ್ಪ ಪೊಲೀಸರಿಗೆ ದೂರು ನೀಡಿದ್ದು, ಶಂಕಾಸ್ಪದ ಸಾವು ಪ್ರಕರಣದೊಂದಿಗೆ, ಕಿರುಕುಳದ ಆರೋಪದಂತೆ ಪವಿನ್ ತಿಮ್ಮಯ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಇಂದು ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸರ ತನಿಖೆ ಬಳಿಕವಷ್ಟೇ ನೈಜಾಂಶ ಹೊರಬೀಳಬೇಕಿದೆ.