ವೀರಾಜಪೇಟೆ, ಜು. 22 : ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ ವೀರಾಜಪೇಟೆ ವಿಭಾಗಕ್ಕೆ 0.31 ಇಂಚು ಮಳೆ ಸುರಿದಿದೆ. ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಅಧಿಕ ಸಮಯ ವಿದ್ಯುತ್ ಸಂಪರ್ಕ ಕಡಿತಗೊಂಡುದರಿಂದ ಒಂದು ದಿನ ರಾತ್ರಿ ವೀರಾಜಪೇಟೆ ಪಟ್ಟಣ ಕಾರ್ಗತ್ತಲಿನಿಂದ ಕೂಡಿದ್ದು, ಈಗ ಚೆಸ್ಕಾಂ ಇದನ್ನು ದುರಸ್ತಿ ಪಡಿಸಿ ವಿದ್ಯುತ್ ಸಂಪಕ್ ಕಲ್ಪಿಸಿದೆ.

ಕದನೂರು ಗ್ರಾಮದ ರಸ್ತೆಯ ಬದಿಯಲ್ಲಿರುವ ಖಾಲಿ ಜಾಗ ಹಾಗೂ ಗದ್ದೆಗಳು ಜಲಾವೃತವಾಗಿದ್ದು, ಈಗ ನಿಧಾನವಾಗಿ ನೀರಿನ ಪ್ರಮಾಣ ಇಳಿಮುಖ ಕಂಡಿದೆ. ವೀರಾಜಪೇಟೆ ತಾಲೂಕು ತಹಸೀಲ್ದಾರ್ ಗೋವಿಂದರಾಜ್ ಮಳೆ ನಿಮಿತ್ತ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ತಾಲೂಕಿನಲ್ಲಿ ಕೆಲವು ಕೃಷಿ ಭೂಮಿ ಜಲಾವೃತ ಹಾಗೂ ಪೆರುಂಬಾಡಿ ಕೆರೆಯ ಬಳಿ ರಸ್ತೆ ಕುಸಿತಗೊಂಡಿದನ್ನು ಹೊರತು ಪಡಿಸಿದರೆ ಯಾವದೇ ಪ್ರದೇಶದಲ್ಲಿ ಹಾನಿ ಉಂಟಾಗಿಲ್ಲ. ಇಂದಿನ ತನಕ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ 5 ಬಾರಿ ಮಳೆ ಹಾನಿ ಪರಿಹಾರ ಕೋರಿ ಅರ್ಜಿಗಳು ಬಂದಿದ್ದು, ಈ ಅರ್ಜಿಗಳು ಪರಿಹಾರಕ್ಕೆ ಅರ್ಹತೆ ಇಲ್ಲ ಎಂದು ತಿಳಿಸಿದ್ದಾರೆ. ಪೆರುಂಬಾಡಿಯಲ್ಲಿ ರಸ್ತೆ ಕುಸಿತಗೊಂಡು ಕೊಡಗು ಕೇರಳದ ಕೂಟುಪೊಳೆ, ಇರಿಟ್ಟಿ, ಮಟ್ಟನೂರು ಕಣ್ಣಾನೂರಿಗೆ ತೆರಳುವ ರಾಜ್ಯ ಹೆದ್ದಾರಿ ರಸ್ತೆ ಬಂದ್ ಆಗಿರುವ ಕುರಿತು ಸರಕಾರಕ್ಕೆ ವರದಿ ಕಳಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.