ಪೊನ್ನಂಪೇಟೆ, ಜು. 22: ಚಿತ್ರವನ್ನು ನೋಡಿಕೊಂಡು ಮಳೆಗಾಲದ ಅವಧಿಯಲ್ಲಿ ಕೊಡಗಿನಲ್ಲಿ ನಡೆಯುವ ಯಾವದೋ ನಾಲ್ಕು ಚಕ್ರಗಳ ಆಫ್ ರೋಡ್ ರ್ಯಾಲಿ ಎಂದು ತಿಳಿದುಕೊಳ್ಳಬೇಡಿ. ಇದು ಮೀಸಲು ಅರಣ್ಯ ದೊಳಗೆ ಎರಡು ವಾಹನ ಸಿಲುಕಿ ಕೊಂಡು ಪರದಾಡಿದ ಪರಿ ಇದು. ವಾಹನಗಳು ಅರಣ್ಯದೊಳಗಿನ ರಸ್ತೆಯಲ್ಲಿ ಸಿಲುಕಿ ಕೊಂಡು ಗಂಟೆಗಟ್ಟಲೆ ಹರಸಾಹಸ ಪಟ್ಟರೂ ಮೇಲೆ ಬರಲು ಸಾಧ್ಯವಾಗದೆ ಇರುವ ಕಾರಣ ಕೊನೆಗೆ ಗಜರಾಜನ ಸಹಾಯವನ್ನು ಆಶ್ರಯಿಸುವದು ಅನಿವಾರ್ಯವಾಯಿತು. ಹೀಗೆ ಮೂರು ಗಂಟೆಗಳ ಕಾಲ ನಡೆದ ಕಾರ್ಯಾ ಚರಣೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡ ವಾಹನಗಳಿಗೆ ಮುಕ್ತಿ ನೀಡಲಾಯಿತು.
ಏನಿದು ಘಟನೆ?ಅರಣ್ಯ ಇಲಾಖೆ ಮತ್ತು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರದಂದು ತಿತಿಮತಿ ಅರಣ್ಯ ವಲಯದ ಮಜ್ಜಿಗೆಹಳ್ಳ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಮೂಹಿಕವಾಗಿ ವಿವಿಧ ಜಾತಿಯ ಮತ್ತು ಹಣ್ಣಿನ ಗಿಡ ಸೇರಿದಂತೆ ಜಾತಿ ಹುಲ್ಲು ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡದ್ದರಿಂದ, ಎಲ್ಲಾ ವಾಹನಗಳು ಅರಣ್ಯದೊಳಗೆ ತೆರಳಲು
(ಮೊದಲ ಪುಟದಿಂದ) ಸಾಧ್ಯವಾಗದ ಕಾರಣ ಒಂದೆರಡು ವಾಹನಗಳಲ್ಲಿ ಮಾತ್ರ ಅವರನ್ನು ಅರಣ್ಯದೊಳಗೆ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗೆ ವಿದ್ಯಾರ್ಥಿಗಳನ್ನು ಕರೆದ್ದೋಯ್ಯುವ ವೇಳೆ ತೀರಾ ಕೆಸರಿನಿಂದ ಕೂಡಿದ ಅರಣ್ಯದೊಳಗಿನ ಕಿರಿದಾದ ಮಣ್ಣು ರಸ್ತೆಯೊಂದರಲ್ಲಿ ಎರಡು ವಾಹನಗಳು ಸಿಲುಕಿಕೊಂಡಿತು. ಇದರಿಂದ ರಸ್ತೆ ಸಂಪರ್ಕ ಕಡಿದುಕೊಂಡು ಪರದಾಡು ವಂತಾಯಿತು. ಸಿಲುಕಿಕೊಂಡ ವಾಹನವನ್ನು ಮೇಲೆತ್ತಲು ನೆರೆದಿದ್ದ ಹಲವಾರು ಮಂದಿ ತಮ್ಮಲ್ಲಿದ್ದ ವಿವಿಧ ಕೌಶಲ್ಯ ಮತ್ತು ನೈಪುಣ್ಯತೆಯನ್ನು ಬಳಸಿದರೂ ಯಶಸ್ವಿಯಾಗಲಿಲ್ಲ. ನಂತರ ಕೆಸರುಮಯಗೊಂಡಿದ್ದ ರಸ್ತೆಯ ಮೇಲ್ಭಾಗದ ಮಣ್ಣನ್ನು ತೆಗೆದ ಪರಿಣಾಮ ಮುಂಭಾಗದಲ್ಲಿ ಸಿಲುಕಿಕೊಂಡಿದ್ದ ಹರಿಹರದ ಮುಕ್ಕಾಟಿರ ಸಂದೀಪ್ ಅವರ ‘ಪೋರ್ವೀಲ್’ ತಂತ್ರಜ್ಞಾನದ ಜೀಪನ್ನು ಸಂದೀಪ್ ಅವರೇ ಹರಸಾಹಸಪಟ್ಟು ಚಾಲಿಸಿ ಮೇಲಕ್ಕೆ ತಂದು ನಿಟ್ಟುಸಿರುಬಿಟ್ಟರು.
ನಂತರ ರಸ್ತೆ ಮಧ್ಯ ಸಿಲುಕಿಕೊಂಡಿದ್ದ ಚೊಟ್ಟೆಮಂಡ ಬಿಪಿನ್ ಅವರ ಪಿಕ್ಅಪ್ ವಾಹನವನ್ನು ಸೇರಿದ್ದ ಹತ್ತಾರು ಮಂದಿ ಹಗ್ಗಕಟ್ಟಿ ಎಳೆದರೂ ಮೇಲೆತ್ತುವಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ. ಆದ್ದರಿಂದ ಅರಣ್ಯದೊಳಗೆ ಈ ಘಟನೆ ನಡೆದಿರುವ ಕಾರಣ ಸಮೀಪದ ಮತ್ತಿಗೋಡು ಆನೆ ಶಿಬಿರದಿಂದ ಸಾಕಾನೆಗಳನ್ನು ಕರೆಸಿ ಸಿಲುಕಿಕೊಂಡ ವಾಹನವನ್ನು ಮೇಲೆತ್ತುವ ನಿರ್ಧಾರಕ್ಕೆ ಬರಲಾಯಿತು. ಇದೇ ವೇಳೆ ಸ್ಥಳದಲ್ಲಿದ್ದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಕೋರಿದರು. ಇದರಿಂದ ಎಚ್ಚೆತ್ತುಕೊಂಡ, ಸ್ಥಳದಲ್ಲಿ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಸ್ಥಳಕ್ಕೆ ಆನೆಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದರು.
ಇದರಂತೆ ಒಂದು ತಾಸುಗಳ ನಂತರ ಸ್ಥಳಕ್ಕೆ ಮೊದಲು ಬಂದ ಮತ್ತಿಗೋಡು ಶಿಬಿರದ ‘ಗೋಪಾಲಸ್ವಾಮಿ’ ಆನೆ ಮೊದಲು ಬಂದು ಸ್ಥಳ ಪರಿಶೀಲನೆ ಮಾಡಿದಂತೆ ಫೋಸ್ ನೀಡಿತು. ಆದರೆ ವಾಹನ ಮೇಲೆತ್ತಲು ಹೆಚ್ಚಿನ ಆಸಕ್ತಿ ತೋರಿದಂತಿರಲಿಲ್ಲ. ಇದರ ಹಿಂದೆ ಮತ್ತೆ ಬಂದ ಇದೇ ಶಿಬಿರದ ‘ಅಭಿಮನ್ಯು’ ಆನೆ “ನನಗೆ ಇದ್ಯಾವ ಲೆಕ”್ಕ ಎಂಬಂತೆ ಸರಳವಾಗಿ ಪರಿಗಣಿಸಿದಂತಿತ್ತು. ಆದರೆ ‘ಗೋಪಾಲಸ್ವಾಮಿ’ ಇದ್ದದರಿಂದ ಸಿಲುಕಿಕೊಂಡ ವಾಹನವನ್ನು ಮೇಲೆತ್ತಲು ಹೆಚ್ಚಿನ ಆಸಕ್ತಿ ತೋರಿದಂತಿರಲಿಲ್ಲ. ‘ಗೋಪಾಲಸ್ವಾಮಿ’ ಮತ್ತು ‘ಅಭಿಮನು’್ಯ ಸ್ಥಳದಲ್ಲಿ ಪರಸ್ಪರ ಕಾದಾಡುವ ಸಾಧ್ಯತೆ ಇದ್ದದರಿಂದ ಕೂಡಲೆ ಎಚ್ಚೆತ್ತುಕೊಂಡ ‘ಗೋಪಾಲಸ್ವಾಮಿ’ ಆನೆಯ ಮಾವುತ ಅದನ್ನು ಅರಣ್ಯದೊಳಗೆ ಕರೆದುಕೊಂಡು ಹೋದರು. ನಂತರ ಸ್ವಲ್ಪ ಉತ್ಸುಕನಾದಂತೆ ಕಂಡುಬಂದ ‘ಅಭಿಮನ್ಯು’ ತನ್ನ ಬಳಿ ಇದ್ದ ಸರಪಳಿಯನ್ನು ವಾಹನದ ಮುಂಭಾಗಕ್ಕೆ ಜೋಡಿಸಿ ಸರಳವೆಂಬತೆ ಹೆಜ್ಜೆ ಹಾಕಿದಾಗ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಪಿಕ್ಆಪ್ ಜೀಪು ತನ್ನಿಂದ ತಾನೇ ಮೇಲೆ ಬಂದು ನೆರೆದಿದ್ದ ನೂರಾರು ಜನರ ಆತಂಕವನ್ನು ದೂರ ಮಾಡಿತ್ತಲ್ಲದೆ ಎಲ್ಲರಿಂದಲೂ ಬೇಷ್ ಎನಿಸಿಕೊಂಡಿತು.
ವಿಶೇಷ ವರದಿ-ರಫೀಕ್ ತೂಚಮಕೇರಿ