ಮಡಿಕೇರಿ, ಜು. 22: ತಾ. 14 ರಂದು ನಡೆದ ಮಡಿಕೇರಿ ನಗರ ದಸರಾ ಬೈಲಾ ತಿದ್ದುಪಡಿಯ ಅಂಗೀಕಾರ ಸಭೆಯು ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ಆರಂಭದಲ್ಲೇ ಗೊಂದಲದ ಗೂಡಾಗಿ ಪರಿವರ್ತನೆ ಗೊಂಡಿತು.ಹಿಂದಿನ ಸಭೆಯ ನಿರ್ಣಯ ಗಳನ್ನು ಅಂಗೀಕರಿಸುವಂತೆ ದಶಮಂಟಪ ಹಾಗೂ ಕರಗ ಸಮಿತಿ ಸದಸ್ಯರು ಪಟ್ಟು ಹಿಡಿದರೆ, ಕಾರ್ಯಾಧ್ಯಕ್ಷರ ಆಯ್ಕೆಯಲ್ಲಿ ಬದಲಾವಣೆ ಅಗತ್ಯ ಎಂದು ದಸರಾ ಸಮಿತಿ ಹಾಗೂ ನಗರಸಭಾ ಅಧ್ಯಕ್ಷೆ ಸೇರಿದಂತೆ ಹಲವರು ಒತ್ತಾಯಿಸಿದರು. ಆರೋಪ-ಪ್ರತ್ಯಾರೋಪಗಳಲ್ಲಿ 45 ನಿಮಿಷ ಕಾಲಹರಣವಾದ ಸಭೆಯಲ್ಲಿ ಹಿಂದಿನ ನಿರ್ಣಯವನ್ನು ಒಪ್ಪಲು ಸಾಧ್ಯವಿಲ್ಲವೆಂದು ಘೋಷಿಸಿದ ಅಧ್ಯಕ್ಷರು ಸಭಾತ್ಯಾಗ ಮಾಡಿ ಇತರ ಹಲವರು ಅವರನ್ನು ಹಿಂಬಾಲಿಸಿದರು.ಯಾವದೇ ಅಂಗೀಕಾರವಾಗದ ಸಭೆ ಅರ್ಧದಲ್ಲೇ ಮೊಟಕುಗೊಂಡು, 30 ವರ್ಷಗಳ ನಂತರದ ಬೈಲಾ ತಿದ್ದುಪಡಿ ಅವಶ್ಯಕತೆ ಮನ ಗಂಡಿದ್ದವರು ಮನನೊಂದು ಹಿಂತಿರುಗಿದರು.

ತಾ. 14ರ ತೀರ್ಮಾನದಂತೆ ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ಮಧ್ಯಾಹ್ನ 3.30ಕ್ಕೆ ಆರಂಭಗೊಂಡಿತು. ಸ್ವಾಗತ ಮಾತು ಗಳನ್ನಾಡಿದ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು ಸಭೆಯನ್ನು

(ಮೊದಲ ಪುಟದಿಂದ) ಸುಸೂತ್ರವಾಗಿ ನಡೆಸಿ ಬೈಲಾಕ್ಕೆ ಒಂದು ರೂಪು ಕೊಡಲು ಎಲ್ಲರ ಸಹಕಾರ ಬಯಸಿದರು. ಅಧ್ಯಕ್ಷತೆ ವಹಿಸಿದ್ದ ನಗರಸಭೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಕಳೆದ ವಾರದ ಸಭೆಯ ಚರ್ಚೆಯಲ್ಲಿನ ಹಲವು ಅಂಶಗಳಲ್ಲಿ ಬದಲಾವಣೆಯ ಅಗತ್ಯವಿದೆ ಎಂದರು.

ದಸರಾ ಸಮಿತಿಯಲ್ಲಿ ನಗರಸಭಾ ಸದಸ್ಯರುಗಳಿಗೆ ಹೆಚ್ಚಿನ ಅವಕಾಶ ಗಳಿರುವದರಿಂದ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ನಗರಸಭಾ ಸದಸ್ಯರ ಬದಲು ಸಾರ್ವಜನಿಕ ಕ್ಷೇತ್ರದಿಂದ ವ್ಯಕ್ತಿಗಳನ್ನು ಆರಿಸುವಂತಾಗಬೇಕು ಎಂದರಲ್ಲದೆ, ಚುನಾವಣಾ ಸಂದರ್ಭ ಬಂದರೆ ನಗರಸಭಾ ಸದಸ್ಯರುಗಳಿಗೂ ಮತದಾನದ ಹಕ್ಕು ಇರಬೇಕೆಂದರು. ಇದಕ್ಕೆ ದಶಮಂಟಪ ಸಮಿತಿ ಯವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ವಿಷಯದ ಕುರಿತು ಸಾಕಷ್ಟು ಚರ್ಚೆ-ವಿಚರ್ಚೆಗಳು ಕಳೆದ ಸಭೆಯಲ್ಲೇ ನಡೆದಿದ್ದು, ಅದರ ಅಂಗೀಕಾರವಾಗಬೇಕೇ ಹೊರತು ಬದಲಾವಣೆ ಆಗಬಾರದೆಂದರು.

ಈ ಸಂದರ್ಭದಲ್ಲಿ ವಾದ-ವಿವಾದಗಳ ಬಿಸಿ ತೀವ್ರಗೊಂಡು ಸಭೆ ಗೊಂದಲದ ಗೂಡಾಯಿತು. ಯಾರ ಮಾತು ಯಾರೂ ಕೇಳದ ಸ್ಥಿತಿ ಉಂಟಾಯಿತು. ನಗರಸಭೆಯ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವಿನ ಉದ್ವೇಗದ ಮಾತುಗಳಲ್ಲಿ ರಾಜಕೀಯವೂ ಪ್ರವೇಶಿಸಿತು. ಹಲವರು ಮೌನಕ್ಕೆ ಜಾರಿದರೆ, ಮತ್ತೆ ಕೆಲವರು ಪರಸ್ಪರ ಮಾತಿನ ಕೆಸೆರೆರೆಚಾಟದಲ್ಲಿ ತೊಡಗಿದರು.

ಕಾರ್ಯಾಧ್ಯಕ್ಷರ ಆಯ್ಕೆಯಲ್ಲಿ ದಶಮಂಟಪ ಹಾಗೂ ಕರಗ ಸಮಿತಿಯ 14 ಮಂದಿಯ ತೀರ್ಮಾನವೇ ಅಂತಿಮವಾಗಬೇಕು ಎಂದು ಪ್ರತಿಪಾದಿಸಿದ ಗುಂಪು ಅಧ್ಯಕ್ಷರತ್ತ ಆಗಮಿಸಿ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವದನ್ನು ವಿರೋಧಿಸಿತು. ಉದ್ವೇಗಕ್ಕೆ ಒಳಗಾದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಯಾವದೇ ಕಾರಣಕ್ಕೂ ಬದಲಾವಣೆ ಇಲ್ಲದೆ ನಿರ್ಣಯವನ್ನು ಅಂಗೀಕರಿಸಲು ಒಪ್ಪುವದಿಲ್ಲವೆಂದು ಏರಿದ ಧ್ವನಿಯಲ್ಲಿ ಮಾತನಾಡಿದರು.

ಮೂಡಾ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರುಗಳಾದ ನಂದಕುಮಾರ್, ಪ್ರಕಾಶ್ ಆಚಾರ್ಯ, ಉದಯಕುಮಾರ್, ವೆಂಕಟೇಶ್, ಹಾಗೂ ಇತರರು ಅಧ್ಯಕ್ಷರನ್ನು ಬೆಂಬಲಿಸಿದರೆ, ನಗರಸಭೆ ಹಾಗೂ ದಸರಾ ಸಮಿತಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ನಗರಸಭಾ ಸದಸ್ಯ ಉಣ್ಣಿಕೃಷ್ಣ, ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಎಂ.ಬಿ. ದೇವಯ್ಯ, ದಸರಾ ಸಮಿತಿಯ ಬಿ.ಕೆ. ಅರುಣ್‍ಕುಮಾರ್, ಉಮೇಶ್ ಸುಬ್ರಮಣಿ, ಬಿ.ಎಂ. ರಾಜೇಶ್, ಬಿ.ಎಸ್. ಗುರುರಾಜ್ ಹಾಗೂ ಇತರರು ಅಧ್ಯಕ್ಷರ ನಿಲುವನ್ನು ಖಂಡಿಸಿದರು.

ತನ್ನ ಅಭಿಪ್ರಾಯಕ್ಕೆ ಬದ್ಧ ಎಂದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಮಾಜಿ ಅಧ್ಯಕ್ಷೆ ಜುಲೇಕಾಬಿ, ತಜಸುಂ ಹಾಗೂ ಇತರರು ಅವರನ್ನು ಹಿಂಬಾಲಿಸಿದರು. ಅರ್ಧದಲ್ಲೇ ನಿಂತ ಸಭೆಯಿಂದಾಗಿ ಇಂದು ಬೈಲಾ ತಿದ್ದುಪಡಿಯಾಗ ಬೇಕೆಂಬ ಮಡಿಕೇರಿ ನಾಗರಿಕರ ಕನಸು ಭಗ್ನಗೊಂಡಿತು.