ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.ದಿನಾಂಕ 21.5.2012 ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಕೋತೂರು ಗ್ರಾಮದ ಲಕ್ಕುಂದ ಎಂಬಲ್ಲಿ ಎಂ.ಆರ್. ವೇಲಾಯುಧನವರ ಅಂಗಡಿಯ ಎದುರಿನಲ್ಲಿ ಹೆಚ್.ಆರ್. ರವಿ ಎಂಬವರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳು ಹಳೆಯ ವೈಷಮ್ಯದಿಂದ ಜಾತಿ ನಿಂದನೆ ಮಾಡಿದ್ದು, ಆರೋಪಿಗಳಾದ ಚಿಮ್ಮಣಮಾಡ ಪೂವಯ್ಯ ಅಲಿಯಾಸ್ ಸುಧಿ ಮತ್ತು ಬೊಳ್ಳಿಮಾಡ ಸುಬ್ಬಯ್ಯ ಅಲಿಯಾಸ್ ಅರಸು ಎಂಬವರು ದೊಣ್ಣೆಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದು, ಬೊಳ್ಳಿಮಾಡ ಉತ್ತಪ್ಪ ಅಲಿಯಾಸ್ ವಾಸು ತನ್ನ ತಲೆಯಿಂದ ರವಿಯ ಮುಖಕ್ಕೆ ಹೊಡೆದು ತುಟಿ ಮತ್ತು ಮೂಗಿಗೆ ಗಾಯಪಡಿಸಿದ್ದಾಗಿ ನೀಡಿದ ಪುಕಾರಿನ ಮೇರೆಗೆ ಕುಟ್ಟ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಆರೋಪಿತರ ವಿರುದ್ಧ ಪ್ರಕರಣವನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿಗಳು ಅಪರಾಧ ಎಸಗಿರುವದು ಸಾಬೀತಾಗಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ. ಮಹಾಸ್ವಾಮೀಜಿ ತೀರ್ಪು ನೀಡಿದ್ದಾರೆ.

ಸದರಿ ತೀರ್ಪಿನ ಮೇರೆಗೆ ಆರೋಪಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌ) ತಡೆ ಕಾಯ್ದೆ ಅಡಿ ಅಪರಾಧಕ್ಕಾಗಿ 4 ವರ್ಷಗಳ ಕಾರಾಗೃಹ ವಾಸ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಆರೋಪಿಗಳು ಪಿಯಾದುದಾರನಿಗೆ ಮುಖಕ್ಕೆ ಡಿಚ್ಚಿ ಹೊಡೆದು ತುಟಿಗೆ ಮತ್ತು ಮೂಗಿಗೆ ಸಾಮಾನ್ಯ ಗಾಯಪಡಿಸಿದ ಅಪರಾಧಕ್ಕಾಗಿ 1 ವರ್ಷ ಕಾರಾಗೃಹ ವಾಸ ಮತ್ತು ತಲಾ ರೂ. 3 ಸಾವಿರ ದಂಡವನ್ನು, ದೊಣ್ಣೆಗಳಿಂದ ತಲೆಗೆ, ಕೈ, ಕಾಲುಗಳಿಗೆ ಹೊಡೆದು ಗಾಯಪಡಿಸಿ ಅಪರಾಧಕ್ಕಾಗಿ 3 ವರ್ಷ ಕಾರಾಗೃಹ ವಾಸ, ತಲಾ ರೂ. 5 ಸಾವಿರ ದಂಡ ವಿಧಿಸಲಾಗಿದೆ.

ಆರೋಪಿಗಳಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆಯೂ, ವಸೂಲಾಗುವ ಒಟ್ಟು ದಂಡದ ಹಣದಲ್ಲಿ ರೂ. 50 ಸಾವಿರವನ್ನು ಫಿರ್ಯಾದುದಾರ ಗಾಯಾಳುವಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್‍ಖಾನ್ ನಡೆಸಿದರು.