ಸೋಮವಾರಪೇಟೆ, ಜು. 22: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಗಸ್ಟ್ 29 ರಂದು ಕುಶಾಲನಗರದ ರೈತ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಜೇನು ಕುರುಬ ಸಮುದಾಯದ ಸಾಂಸ್ಕøತಿಕ ಸಮ್ಮೇಳನ ನಡೆಸುವ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.ತಹಶೀಲ್ದಾರ್ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಸಾಂಸ್ಕøತಿಕ ಸಮ್ಮೇಳನದಲ್ಲಿ ತಾಲೂಕಿನ ಎಲ್ಲಾ ಜೇನುಕುರುಬ ಜನಾಂಗದವರು ಭಾಗವಹಿಸಬೇಕು. ಕಲಾ ತಂಡಗಳಿಗೆ ತಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಪ್ರಸ್ತುತ ಪಡಿಸಲು ವೇದಿಕೆ ಒದಗಿಸಲಾಗಿದ್ದು, ಕಾರ್ಯಕ್ರಮ ನೀಡುವ ತಂಡದವರು ಹೆಸರು ನೀಡಬೇಕೆಂದು ಸಮಾಜಕಲ್ಯಾಣ ಇಲಾಖಾಧಿಕಾರಿ ರಾಮೇಗೌಡ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಊಟೋಪಚಾರ, ಹಾಡಿಗಳಿಂದ ಕರೆತರಲು ವಾಹನ ವ್ಯವಸ್ಥೆ, ಜನಾಂಗದ 10 ಮಂದಿ ಸಾಧಕರಿಗೆ ಮತ್ತು ಜೇನುಕುರುಬ ಸಮುದಾಯದ ಈರ್ವರು ಹಿರಿಯರಿಗೆ ಸನ್ಮಾನ ಮಾಡಲು ನಿರ್ಧರಿಸಲಾಯಿತು.
ಇಲಾಖೆಯಿಂದ ಸಮ್ಮೇಳನಕ್ಕೆ 2 ಲಕ್ಷ ಅನುದಾನ ಬಿಡುಗಡೆಯಾಗಲಿದ್ದು, ಕಾರ್ಯಕ್ರಮವನ್ನು ಅದ್ದೂರಿ ಮತ್ತು ಅಚ್ಚುಕಟ್ಟಾಗಿ ಆಯೋಜಿಸಬೇಕು. ಸಂಪೂರ್ಣ ಹಣ ಜೇನುಕುರುಬ ಜನಾಂಗದ ಸಂಸ್ಕøತಿ, ಆಚಾರ ವಿಚಾರಗಳ ಪ್ರೋತ್ಸಾಹಕ್ಕೆ ವಿನಿಯೋಗವಾಗಬೇಕು ಎಂದು ಮುಖಂಡ ಸುಬ್ರಮಣಿ ಸಲಹೆ ನೀಡಿದರು.
ಸಭೆಯಲ್ಲಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ರಾಜಾರಾವ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ರಾಜಶೇಖರ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೈಲಾ, ಗಿರಿಜನ ಮುಖಂಡರಾದ ಸೋಮಕ್ಕ, ಆರ್.ಕೆ. ಚಂದ್ರು ಸೇರಿದಂತೆ ವಿವಿಧ ಹಾಡಿಗಳ ಜೇನುಕುರುಬ ಜನಾಂಗದ ಮುಖಂಡರು ಭಾಗವಹಿಸಿದ್ದರು.