ಮಡಿಕೇರಿ, ಜು. 22: ಪರಿಶಿಷ್ಟ ಜಾತಿಯ ಮಹಿಳೆಯೋರ್ವಳನ್ನು ಮಾನಭಂಗಕ್ಕೆ ಯತ್ನಿಸಿ, ಜಾತಿ ನಿಂದನೆ ಮಾಡಿದ ಆರೋಪಿಗಳಿಗೆ ಕಾರಾಗೃಹದ ವಾಸದ ಜೊತೆಗೆ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ದಿನಾಂಕ 1.6.2012 ರಂದು ಸಂಜೆ 7 ಗಂಟೆಗೆ ಕುಶಾಲನಗರದ ಹಳೇಗೋಟೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಯೋರ್ವಳನ್ನು ಆರೋಪಿಗಳಾದ ಹೆಚ್.ಎಸ್. ಗಣೇಶ, ಹೆಚ್.ಎಸ್. ಕೇಶವ ಹಾಗೂ ಹೆಚ್.ಎಸ್. ದೇವರಾಜು ಮತ್ತು ಜಗದೀಶ ಎಂಬವರು ಮನೆಯ ಹಿಂಭಾಗದಲ್ಲಿರುವ ಉಣ್ಣಿಗುತ್ತಿ ಮೂಲೆ ಎಂಬಲ್ಲಿಗೆ ಎಳೆದೊಯ್ದು ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಆಕೆಯ ತಲೆಗೆ ಗಾಯವಾಗಿತ್ತು. ಈ ಸಂದರ್ಭ ಜಗದೀಶ ಆಕೆಗೆ ಜಾತಿನಿಂದನೆ ಮಾಡಿ ಬೈಯ್ದು, ರೇಪ್ ಮಾಡಿ, ಕೊಂದು ಬಿಡಿ, ಎಷ್ಟು ಖರ್ಚಾದರೂ ತಾನು ನೋಡಿಕೊಳ್ಳುತ್ತೇನೆ ಎಂದು ಪ್ರಚೋದನೆ ನೀಡಿರುವದಾಗಿ ನೀಡಿದ ಪುಕಾರಿನ ಮೇರೆಗೆ ಕುಶಾಲನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ಪ್ರಕರಣವನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿಗಳು ಅಪರಾಧ ಎಸಗಿರುವದು ವಿಚಾರಣೆಯಿಂದ ಸಾಬೀತಾಗಿದೆ ಎಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ತೀರ್ಪು ನೀಡಿದ್ದಾರೆ. ತೀರ್ಪಿನ ಮೇರೆಗೆ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ದೌ) ತಡೆ ಕಾಯ್ದೆ ಅಡಿಯಲ್ಲಿ ಅಪರಾಧಕ್ಕಾಗಿ 4 ವರ್ಷಗಳ ಕಾರಾಗೃಹವಾಸ ಮತ್ತು ರೂ. 20,000 ದಂಡ, ಕೃತ್ಯ ಎಸಗಲು ಪ್ರೇರೇಪಿಸಿದ ಅಪರಾಧಕ್ಕಾಗಿ 1 ವರ್ಷ ಕಾರಾಗೃಹ ವಾಸ ಮತ್ತು ರೂ. 5,000 ದಂಡ ವಿಧಿಸಲಾಗಿದೆ.
ಆರೋಪಿಗಳಾದ ಗಣೇಶ, ಕೇಶವ, ದೇವರಾಜು ಇವರುಗಳಿಗೆ ಮಾನಭಂಗ ಮಾಡಲು ಯತ್ನಿಸಿದ ಅಪರಾಧಕ್ಕಾಗಿ 2 ವರ್ಷಗಳ ಕಾರಾಗೃಹ ವಾಸ ಮತ್ತು ತಲಾ 25,000 ದಂಡವನ್ನು ವಿಧಿಸಲಾಗಿದೆ. ಆರೋಪಿ ಜಗದೀಶನಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸು ವಂತೆಯೂ, ಒಟ್ಟು ವಸೂಲಾಗುವ ರೂ. 1 ಲಕ್ಷ ದಂಡದ ಹಣದಲ್ಲಿ ರೂ. 95 ಸಾವಿರವನ್ನು ನೊಂದವಳಿಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್‍ಖಾನ್ ನಡೆಸಿದರು.