ಕುಶಾಲನಗರ, ಜು 22: ಪತ್ರಿಕೆ ಮತ್ತು ಮಾಧ್ಯಮಗಳಿಂದ ಮಾತ್ರ ಸಮಾಜದ ಅಂಕುಡೊಂಕು ಸರಿಪಡಿಸಲು ಸಾಧ್ಯ ಎಂದು ಚಿಕ್ಕಅಳುವಾರದ ಮಂಗಳೂರು ಸ್ನಾತಕೋತ್ತರ ವಿಶ್ವವಿದ್ಯಾಲಯದ ಪ್ರಭಾರ ನಿರ್ದೇಶಕರಾದ ಪ್ರೊ.ಪಿ.ಎಲ್.ಧರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಹಭಾಗಿತ್ವದೊಂದಿಗೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಸಾಮಾಜಿಕ ಪಿಡುಗುಗಳು, ಭ್ರಷ್ಟಾಚಾರ, ತನಿಖಾ ವರದಿಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪತ್ರಿಕಾ ರಂಗದ ಕೊಡುಗೆ ಅಪಾರ ಎಂದರು.
ಪತ್ರಕರ್ತರು ಪರಿಸರದ ಬಗ್ಗೆ ಕಾಳಜಿ ವಹಿಸುವದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವದು ಇಂದಿನ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಯುವಪೀಳಿಗೆ ತಮ್ಮ ಜೀವನದಲ್ಲಿ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆದಲ್ಲಿ ಮಾತ್ರ ಜೀವನ ಸಾರ್ಥಕತೆ ಹೊಂದಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಾಧಿಸುವ ಛಲ ಹೊಂದಬೇಕು. ಮಾನಸಿಕವಾಗಿ ಕುಗ್ಗಿಸುವಂತಹ ವಿಚಾರಗಳನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ಹೊಂದಬೇಕಿದೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರು ಪ್ರಶ್ನೆ ಮಾಡುವ ಧೈರ್ಯ ಹೊಂದಬೇಕು. ಮಾಧ್ಯಮಗಳು ಸಮಾಜದ ಕೈಗನ್ನಡಿಯಂತೆ ಕೆಲಸ ನಿರ್ವಹಿಸಬೇಕೆಂದರು.
ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ದಿನದ ಮಹತ್ವದ ಕುರಿತು ಪತ್ರಕರ್ತರಾದ ಸಬಲಂ ಭೋಜಣ್ಣ ರೆಡ್ಡಿ ಮಾತನಾಡಿದರು.
ಇದೇ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರಾದ ಕೆ.ಎಸ್.ಮೂರ್ತಿ ಅವರ ಪುತ್ರ ಕೆ.ಎಂ.ಹರ್ಷಿತ್, ಕೊಡಗು ಪ್ರೆಸ್ ಕ್ಲಬ್, ಜಿಲ್ಲಾ ಹಾಗೂ ತಾಲೂಕು ಸಂಘಗಳ ಪ್ರಶಸ್ತಿಗಳಿಗೆ ಭಾಜನರಾದ ಎಂ.ಎನ್.ಚಂದ್ರಮೋಹನ್, ತಾಲೂಕು ಸಂಘದ ಪ್ರಶಸ್ತಿ ವಿಜೇತ ಕೆ.ಕೆ.ನಾಗರಾಜಶೆಟ್ಟಿ ಮತ್ತು ಕೊಡಗು ಪ್ರೆಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಅಜ್ಜಮಾಡ ರಮೇಶ್ ಕುಟ್ಪಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು ನದಿ ಸಂರಕ್ಷಣೆ ಮತ್ತು ಪರಿಸರ ಸ್ವಚ್ಚತೆ ಹಾಗೂ ಪತ್ರಕರ್ತರು ಮತ್ತು ಸಮಾಜ ಎಂಬ ವಿಷಯದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಆವರಣದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಎನ್.ಶಂಭುಲಿಂಗಪ್ಪ ಗಿಡಗಳನ್ನು ನೆಟ್ಟರು.
ಮುಖ್ಯ ಅತಿಥಿಗಳಾಗಿ ವಿವೇಕಾನಂದ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಎಂ.ನಾಗೇಶ್, ಅತಿಥಿಗಳಾಗಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಮುರಳೀಧರ್, ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕವನ್‍ಕಾರ್ಯಪ್ಪ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್, ಸೋಮವಾರಪೇಟೆ ಪತ್ರಿಕಾ ಟ್ರಸ್ಟ್ ಅಧ್ಯಕ್ಷರಾದ ಮಹೇಶ್ ಇದ್ದರು.