ಕುಶಾಲನಗರ, ಜು. 22: ಮುಳ್ಳುಸೋಗೆ ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರ ತುರ್ತು ಸಭೆ ಗ್ರಾ.ಪಂ. ಅಧ್ಯಕ್ಷೆ ಭವ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮದ ಕ್ರಿಯಾ ಯೋಜನೆ ರೂಪಿಸುವದರ ಮೂಲಕ ಸಾಮಾನ್ಯ ವರ್ಗ, ಪ.ಜಾ, ಪ.ಪಂ ಮತ್ತು ಅಲ್ಪಸಂಖ್ಯಾತರಿಗಾಗಿ ವಸತಿ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು.ಇತ್ತೀಚೆಗೆ ಬೆಂಗಳೂರಿನಲ್ಲಿ ವಸತಿ ಸಚಿವ ಕೃಷ್ಣಪ್ಪ ಅವರಿಗೆ ಮುಳ್ಳುಸೋಗೆ ಗ್ರಾ.ಪಂ. ಮನವಿ ಸಲ್ಲಿಸಿ ವಸತಿ ಮಂಜೂರಾತಿ ನೀಡುವ ಸಂದರ್ಭ ಸಾಮಾನ್ಯ ವರ್ಗದವರಿಗೂ ಅನುಕೂಲವಾಗುವಂತೆ 51 ಮನೆ ಗಳನ್ನು ಮತ್ತು ಅಲ್ಪಸಂಖ್ಯಾತರಿಗಾಗಿ 6 ಮನೆಗಳನ್ನು ಹೆಚ್ಚುವರಿಯಾಗಿ ಬೇಡಿಕೆ ಬಂದಿದ್ದು ಅವುಗಳಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸುಮಾರು ರೂ. 1.30 ಲಕ್ಷ ಮತ್ತು ಉದ್ಯೋಗ ಖಾತ್ರಿ ನರೇಗ ಯೋಜನೆಯಡಿಯಲ್ಲಿ ರೂ. 20 ಸಾವಿರ ಸೇರಿದಂತೆ ಒಟ್ಟು 1.50 ಲಕ್ಷ ಹಣವನ್ನು ಸಾಮಾನ್ಯ ವರ್ಗದವರಿಗೆ ಹಂತಹಂತವಾಗಿ ಮನೆ ನಿರ್ಮಿಸಿ ಕೊಡಲು ಸಭೆ ತೀರ್ಮಾನಿಸಿತು.
ಕ್ರಿಯಾ ಯೋಜನೆಯಲ್ಲಿ ವಸತಿ ನಿರ್ಮಾಣ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಎಲ್ಲಾ ವಾರ್ಡುಗಳಿಗೂ ವಿಸ್ತರಿಸಿ ನಡೆಸುವ ಬಗ್ಗೆ ಸಭೆ ತೀರ್ಮಾನಿಸಿತು.
ಪ.ಜಾ ಮತ್ತು ಪ.ಪಂ. ಫಲಾನುಭವಿಗಳಿಗೆ ಶೇ. 25 ರಷ್ಟು ಅನುದಾನವನ್ನು ಸೋಲಾರ್ ದೀಪ, ಕುಕ್ಕರ್ ಮತ್ತು ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ಸಹಾಯಧನ ನೀಡುವದು ಮತ್ತು ಪ.ಜಾ ಮತ್ತು ಪ.ಪಂ. ಮನೆಗಳ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಕಚ್ಚಾ ರಸ್ತೆಗಳ ನಿರ್ಮಾಣಕ್ಕೆ ಸಭೆ ಒಪ್ಪಿಗೆ ನೀಡಿತು.
ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕಚೇರಿ ಸಿಬ್ಬಂದಿಗಳು ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರ ಹೆಚ್ಚಿಸಿರುವ ವೇತನ ಪಾವತಿಸಲು ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ಪೌರಕಾರ್ಮಿಕರು ಪ್ರತಿ 2ನೇ ಶನಿವಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಯಿತು.
ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಕೆಲವೆಡೆ ಡೆಂಗ್ಯೂನಂತಹ ಮಾರಕ ಕಾಯಿಲೆಗೂ ತುತ್ತಾಗಿರುವ ಪ್ರಕರಣಗಳು ಕಂಡು ಬಂದಿದ್ದು ಔಷಧಿ ಸಿಂಪಡಣೆಗೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ಕೆಲವು ಬಡಾವಣೆಯಲ್ಲಿ ಕೊಳವೆ ಬಾವಿಗಳು ದುರಸ್ತಿಗೀಡಾಗಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಅವುಗಳ ದುರಸ್ತಿ ಕಾರ್ಯ ಜರೂರಾಗಿ ಕೈಗೆತ್ತಿಕೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಾರ್ಯದರ್ಶಿ ಅನಂತ್, ಪಂಚಾಯಿತಿ ಸದಸ್ಯರು ಇದ್ದರು.