ಗೋಣಿಕೊಪ್ಪಲು, ಜು. 22: ‘ನೋಡಿ ತಿಳಿ ಮಾಡಿ ಕಲಿ’ ಇದೊಂದು ಹಿರಿಯರ ಆಡು ಮಾತು. ಇದೀಗ ಈ ಮೇಲಿನ ಮಾತನ್ನು ಗೋಣಿಕೊಪ್ಪಲು, ಪೆÇನ್ನಂಪೇಟೆ, ಅರುವ ತ್ತೊಕ್ಕಲು ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿ ಕೊಳ್ಳಲೇ ಬೇಕಾದ ಸಂದರ್ಭ ಒದಗಿ ಬಂದಿದೆ. ವರ್ತಕರೂ ಅಷ್ಟೇ ತಮ್ಮ ಅಂಗಡಿಗಳ ಕಸ ಕಡ್ಡಿಯನ್ನು ಗುಡಿಸಿ, ರಸ್ತೆ ಬದಿಗೆ ತಂದು ಸುರಿಯುವಾಗ ಒಂದಷ್ಟು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲೇ ಬೇಕಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಕೊಳೆಯುವ ಪದಾರ್ಥ, ಕಾಗದ- ಕಾರ್ಡ್ ಬೋರ್ಡ್, ಚಪ್ಪಲಿ, ಗಾಜು ಚೂರು, ಅನುಪ ಯುಕ್ತ ಸಿರಿಂಜ್ ಇತ್ಯಾದಿ ಇತ್ಯಾದಿ ಗಳನ್ನು ವಿಂಗಡಿಸಿ ಪೌರಕಾರ್ಮಿಕರು ಕಸ ಹೆಕ್ಕಲು ಬರುವಾಗ ಸಹಾಯ ಹಸ್ತವನ್ನು ಚಾಚಬೇಕಾಗಿದೆ. ಇದೀಗ ಕೆಲವು ದಿನಗಳಿಂದ ಗೋಣಿಕೊಪ್ಪಲು ಕಸವೆಲ್ಲಾ ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಿರುವ ಸೀತಾ ಕಾಲೋನಿಯ ಎರಡು ಎಕರೆ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಗೋಣಿಕೊಪ್ಪಲು ಕಸದ ಕೊಪ್ಪಲೆಂದು ಬಿಂಬಿಸಿ ‘ಶಕ್ತಿ’ಯಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿದ್ದವು. ಇತ್ತೀಚೆಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ನಂತರ ಗೋಣಿಕೊಪ್ಪಲಿನ ಕಸ ಮಾಯವಾಗತೊಡಗಿದೆ.

ಸ್ವಚ್ಛತಾ ಆಂದೋಲನಕ್ಕೆ ನಿಜವಾದ ಅರ್ಥ ಇನ್ನು ಮುಂದೆ ಸಿಗಲಿದೆ. ಸೀತಾಕಾಲೋನಿಯಲ್ಲಿ ವೈಜ್ಞಾನಿಕ ಕಸವಿಲೇವಾರಿಗೆ ಜಾಗ ಗುರುತಿಸಿ, ಶಾಸಕ ಬೋಪಯ್ಯ ಅವರು ಉದ್ಘಾಟನೆ ನೆರವೇರಿಸಿ ತಿಂಗಳುಗಳೇ ಕಳೆದ ನಂತರ ಇದೀಗ ಕಸ ತೆರವು ಬಿರುಸುಗೊಂಡಿದೆ.

ಅಂತೂ ಇಂತೂ ಗೋಣಿಕೊಪ್ಪಲು ಕಸವೆಲ್ಲಾ ದಿನನಿತ್ಯ ಸೀತಾ ಕಾಲೋನಿಯತ್ತ ಪಯಣಿಸು ತ್ತಿರುವದರಿಂದ ಇಲ್ಲಿನ ಜನ ನಿಟ್ಟುಸಿರು ಬಿಡಬಹುದು. ಆದರೆ, ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರತ್ಯೇಕಿಸಿದ ಕಸವನ್ನು ಪೌರ ಕಾರ್ಮಿಕರಿಗೆ ನೀಡಲು ಮುಂದಾಗಬೇಕು. ನಗರದಲ್ಲಿ ಹಲವರು ಪ್ಲಾಸ್ಟಿಕ್, ಕೊಳೆಯುವ ತ್ಯಾಜ್ಯ, ಗಾಜಿನ ಚೂರು ಇತ್ಯಾದಿಗಳನ್ನೆಲ್ಲಾ ಒಂದೇ ಚೀಲದಲ್ಲಿ ತುಂಬಿ ನೀಡುವದು ಅಲ್ಲಲ್ಲಿ ನಡೆದಿದೆ. ಇದರಿಂದಾಗಿ ಕಾರ್ಮಿಕರ ಕೈಗೆ ಗಾಯವಾಗ ಬಹುದು. ಕೆಲವೊಂದು ಕಸ, ಅಪಾಯಕಾರಿ ರಾಸಾಯನಿಕದಿಂದ ಪೌರ ಕಾರ್ಮಿಕರ ಆರೋಗ್ಯವೂ ಹದಗೆಡಬಹುದು. ಈ ನಿಟ್ಟಿನಲ್ಲಿ ಗೋಣಿಕೊಪ್ಪಲು ಮನೆ ಮನೆಗೆ ತೆರಳಿ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ. ವರ್ತಕರು, ಹೊಟೇಲ್ ಮಾಲೀಕರು, ತಂಪು ಪಾನೀಯ ಮಾಲೀಕರು, ಫಾಸ್ಟ್ ಫುಡ್, ಮಸಾಲೆಪುರಿ ಇತ್ಯಾದಿ ಮಾರಾಟಗಾರರನ್ನು ಕರೆದು ಸ್ವಚ್ಛತೆಯ ಹಾಗೂ ವೈಜ್ಞಾನಿಕ ಕಸ ವಿಂಗಡನೆಯ ಪಾಠ ಹೇಳಿಕೊಡಬೇಕಾಗಿದೆ. ಇಲ್ಲವೇ ದಂಡ ವಿಧಿಸಿ ಪಾಠ ಕಲಿಸಬೇಕಾಗಿದೆ.

ಈಗಾಗಲೇ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಕಠಿಣ ನಿಲುವು ತೆಗೆದು ಕೊಂಡಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ 1986 ರ ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡಿದೆ.

ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್, ತಟ್ಟೆ, ಲೋಟ, ಚಮಚವನ್ನೂ ನಿಷೇಧದ ವ್ಯಾಪ್ತಿಗೆ ತಂದಿದ್ದು, 11-03-2016 ರ ಪ್ಲಾಸ್ಟಿಕ್ ಬಳಕೆ ನಿಷೇಧ ಅಧಿಸೂಚನೆಯ ಕಂಡಿಕೆ-2 ರ , 1986ರ ಕಾಯ್ದೆ ಅನ್ವಯ, ಸೆಕ್ಸನ್ 19 ರಡಿ ಉಲ್ಲಂಘನೆ ಮಾಡುವವರ ವಿರುದ್ಧ ನ್ಯಾಯಾಲಯದಲ್ಲಿ ಹಾಜರಾಗಿ ದಂಡ ಪಾವತಿಸುವ ಶಿಕ್ಷೆಗೆ ಒಳಪಡಿಸಲು ಕ್ರಮ ಜರುಗಿಸ ಲಾಗುವದು ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೂ ಕರ್ನಾಟಕ ಗ್ರಾಮ ಪಂಚಾಯತಿಗೆ ಪ್ರದತ್ತವಾದ ಅಧಿಕಾರದಂತೆ ರೂ. 5000 ದಂಡ ವಿಧಿಸಿ, ವ್ಯಾಪಾರ ಪರವಾನಗಿ ರದ್ದುಗೊಳಿಸುವ ಅಧಿಕಾರವನ್ನೂ ಗ್ರಾ.ಪಂ. ಕಾಯ್ದಿರಿಸಿದೆ.

ಇದೀಗ ತಾಲೂಕಿನ ಪ್ರಮುಖ ವಾಣಿಜ್ಯ ನಗರಿಯಲ್ಲಿಯೂ ಸ್ವಚ್ಛತೆಯ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮ ಶೀಘ್ರ ಆರಂಭವಾಗಬೇಕಾಗಿದೆ.

ಮಾಜಿ ಅಧ್ಯಕ್ಷೆಯ ಅಭಿಪ್ರಾಯ ಬಯಸಿದಾಗ, ತನ್ನ ಅವಧಿಯಲ್ಲಿ ಪೌರ ಕಾರ್ಮಿಕರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೆ. ರೈನ್ ಕೋಟ್, ಗಂಬೂಟ್, ಕೈ ಕವಚ, ಗ್ಯಾಸ್ ಸ್ಟವ್ ವಿತರಣೆ, ಮನೆ ರಿಪೇರಿ, ಮೈಸೂರು ಪ್ರವಾಸ, ಆಸ್ಪತ್ರೆ ವೆಚ್ಚ ಇತ್ಯಾದಿ ಒಳಗೊಂಡಂತೆ ತಲಾ ರೂ.10 ಸಾವಿರದವರೆಗೂ ಪೌರ ಕಾರ್ಮಿಕರಿಗೆ ಖರ್ಚು ಮಾಡಲಾಗುತ್ತಿತ್ತು. ಕೈಲ್ ಮುಹೂರ್ತ ಹಬ್ಬದ ದಿನ ಸ್ವಂತ ವೆಚ್ಚದಲ್ಲಿ ಎಲ್ಲ್ಲಾ ಕಾರ್ಮಿಕರಿಗೂ ಮಧ್ಯಾಹ್ನ ಊಟೋಪಚಾರ, ಪೌರಕಾರ್ಮಿಕರೊಂದಿಗೆ ಆಯುಧ ಪೂಜೆ ಆಚರಣೆ, ಹೊಸ ವರ್ಷಾರಂಭ ದಿನ ಕಾರ್ಮಿಕರಿಂದ ಕೇಕ್ ಕತ್ತರಿಸಿ ಶುಭಕೋರಲಾಗುತ್ತಿತ್ತು. ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣ ಮಾಡುತ್ತಿರುವ ಕಾರ್ಮಿಕ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ ಹಾಗೂ ಪಠ್ಯಪುಸ್ತಕ, ನೋಟ್ ಪುಸ್ತಕ ವಿತರಣೆ ಮಾಡಲಾಗುತ್ತಿತ್ತು. ಇದೀಗ ಪರಿಶಿಷ್ಟ ಪಂಗಡದ ಮಹಿಳೆ ಅಧ್ಯಕ್ಷೆಯಾಗಿದ್ದು, ಶೇ. 25 ರ ಅನುದಾನದಲ್ಲಿ ಪೌರ ಕಾರ್ಮಿಕರ ಎಲ್ಲಾ ಮೂಲಭೂತ ಸೌಲಭ್ಯವನ್ನು ನೋಡಿಕೊಳ್ಳಲು ಸಾಧ್ಯವಿದೆ.

ಒಟ್ಟಿನಲ್ಲಿ ಗೋಣಿಕೊಪ್ಪಲು ಪೌರ ಕಾರ್ಮಿಕರ ಬಗ್ಗೆ ಗ್ರಾ.ಪಂ. ಹಾಗೂ ಚುನಾಯಿತ ಜನಪ್ರತಿನಿಧಿಗಳ ಕಾಳಜಿ ಹೆಚ್ಚಬೇಕು. ಉತ್ತಮ ವಸತಿ ವ್ಯವಸ್ಥೆ ಕಲ್ಪಿಸುವಂತಾಗಬೇಕು. ಗೋಣಿ ಕೊಪ್ಪಲು ವರ್ತಕರ ಸಂಘ, ಸ್ತ್ರಿ ಶಕ್ತಿ ಸ್ವ ಸಹಾಯ ಗುಂಪುಗಳು, ಸಮಾಜ ಸೇವಾ ಸಂಘಟನೆಗಳು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸ ತುರ್ತು ಆಗಬೇಕಾಗಿದೆ. ಗ್ರಾ.ಪಂ. ಹಾಗೂ ಸಾರ್ವಜನಿಕರು ಮತ್ತು ವರ್ತಕರು ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಲ್ಲಿ ಗೋಣಿಕೊಪ್ಪಲು ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಸಿಗಲಿದೆ. ಇಲ್ಲವೇ ಸೀತಾ ಕಾಲೋನಿಯಲ್ಲಿಯೂ ಮುಂದೆ ಸಮಸ್ಯೆ ಉಂಟಾದಲ್ಲಿ ಮತ್ತೆ ಗೋಣಿಕೊಪ್ಪಲು ಕಸ ಸಮಸ್ಯೆ ಮರುಕಳಿಸಬಹುದು.

ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಶೀಘ್ರದಲ್ಲಿಯೇ ಪೆÇನ್ನಂಪೇಟೆ ಕಸವನ್ನು ಸೀತಾ ಕಾಲೋನಿಗೆ ವರ್ಗಾಹಿಸಲಾಗುವದು. ಇದೀಗ ಪೆÇನ್ನಂಪೇಟೆ ನ್ಯಾಯಾಲಯದ ಮುಂದಿನ ಖಾಲಿ ನಿವೇಶನದಲ್ಲಿ ದೊಡ್ಡ ಹೊಂಡವನ್ನು ತೆಗೆದು ಎಲ್ಲ ಕಸವನ್ನು ಹಾಕಲಾಗುತ್ತಿದೆ. ನಂತರ ಹೊಂಡವನ್ನು ಮುಚ್ಚಲಾಗುತ್ತದೆ. ಪೆÇನ್ನಂಪೇಟೆ ಮನೆ ಮನೆಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಕರಪತ್ರ ಮೂಲಕ ಹಾಗೂ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ವರ್ತಕರಿಗೆ ಕಸದ ಗಂಭೀರ ಸಮಸ್ಯೆಯನ್ನು ಮನವರಿಕೆ ಮಾಡಲಾಗಿದೆ. ಕಾನೂನು ಮೀರಿದ್ದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವದು ಎಂದು ತಿಳಿಸಿದ್ದಾರೆ. ಅರುವತ್ತೊಕ್ಕಲುವಿನಲ್ಲಿ ಕಸದ ಸಮಸ್ಯೆ ಅಷ್ಟೇನೂ ಇಲ್ಲದಿದ್ದರೂ ಅಧ್ಯಕ್ಷ ತೀತಮಾಡ ಸುಗುಣ ಅವರು ಎಲ್ಲ್ಲಾ ಮನೆಗಳಿಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ. ಪೆÇನ್ನಂಪೇಟೆ ಗ್ರಾ.ಪಂ. ಉದ್ಧೇಶಿತ ಸೀತಾ ಕಾಲೋನಿ ಕಸ ವಿಲೇವಾರಿ ಆವರಣ ಗೋಡೆ, ವಿಂಗಡಣಾ ಕೊಠಡಿಗೆ ಸುಮಾರು ರೂ. 32 ಲಕ್ಷ ಅನುದಾನ ನೀಡಿದೆ ಎನ್ನಲಾಗುತ್ತಿದೆ. ಐಟಿಡಿಪಿ ಇಲಾಖೆಯ ಅನುದಾನ ದಲ್ಲಿ ಸೀತಾ ಕಾಲೋನಿಯಲ್ಲಿ ರೂ. 15 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಗೋಣಿಕೊಪ್ಪಲು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರೂ ಕಸ ಸಾಗಿಸಲು ಅನುಕೂಲ ವಾಗುವಂತೆ ಉತ್ತಮ ರಸ್ತೆ ನಿರ್ಮಾಣಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ತ್ಯಾಜ್ಯ ವಸ್ತು ಕೊಳೆತು ಗೊಬ್ಬರವಾಗಲು ಬೇಸಿಲಸ್ ಬ್ಯಾಕ್ಟೀರಿಯಾವನ್ನು ಸಿಂಪಡಿಸ ಲಾಗುತ್ತಿದೆ. ಗೊಬ್ಬರ ಕೊಳೆಯಲು ಇಎಂ ಸಲ್ಯೂಸನ್ ಎಂಬ ರಾಸಾಯನಿಕ ವನ್ನು 20 ಲೀಟರ್ ನೀರಿಗೆ 1 ಎಂ.ಎಲ್.ನಂತೆ ಕೊಳೆಯುವ ಕಸದ ಮೇಲೆ ಸಿಂಪರಣೆ ಮಾಡುವ ಕಾರ್ಯವೂ ಸೀತಾ ಕಾಲೋನಿಯಲ್ಲಿ ನಡೆಯುತ್ತಿರುವದು ಉತ್ತಮ ಬೆಳವಣಿಗೆ.

ಪಾಲಿಬೆಟ್ಟ ತ್ಯಾಜ್ಯದ ಗೊಬ್ಬರವನ್ನು ಹೆಚ್ಚಿನ ಪರೀಕ್ಷೆಗೆ ಚೆನ್ನೈ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೀಗ 5 ಕೆ.ಜಿ. ಗೊಬ್ಬರ ಪ್ಯಾಕ್ ಉಚಿತವಾಗಿ ವಿತರಿಸಲಾಗುತ್ತಿದ್ದು, ಗೊಬ್ಬರದ ಗುಣಮಟ್ಟ ಖಚಿತಪಟ್ಟ ನಂತರ ನಿಗದಿತ ಶುಲ್ಕ ವಿಧಿಸಿ ಸಾವಯವ ಗೊಬ್ಬರ ಮಾರಾಟ ಮಾಡಲಾಗುವದು ಎಂದು ಪಾಲಿಬೆಟ್ಟ ಪಿಡಿಓ ಎ.ಎ. ಅಬ್ದುಲ್ಲ ತಿಳಿಸಿದ್ದಾರೆ.

ಕಸ ವಿಲೇವಾರಿಯೊಂದಿಗೆ ಗೊಬ್ಬರ, ಗಾಜು, ಬಾಟಲಿ, ಪ್ಲಾಸ್ಟಿಕ್, ರಟ್ಟು ಇತ್ಯಾದಿಗಳನ್ನು ಪ್ರತ್ಯೇಕಿಸಿ ಮೈಸೂರು ಮುಂತಾದೆಡೆಗೆ ಮಾರಾಟ ಮಾಡಲೂ ಪಂಚಾಯಿತಿಗೆ ಅವಕಾಶವಿದೆ.

ಒಟ್ಟಿನಲ್ಲಿ ಗೋಣಿಕೊಪ್ಪಲು, ಪೆÇನ್ನಂಪೇಟೆ ಹಾಗೂ ಅರುವತ್ತೊಕ್ಕಲು ಗ್ರಾ.ಪಂ. ಶಾಶ್ವತ ಕಸ ವಿಲೇವಾರಿಗೆ ಸೀತಾ ಕಾಲೋನಿ ಯಲ್ಲಿ ಹಲವು ಏಳು ಬೀಳುಗಳ ನಡುವೆಯೂ 2 ಎಕರೆ ಜಾಗದಲ್ಲಿ ವೈಜ್ಞಾನಿಕ ವಿಂಗಡನಾ ಘಟಕ ಆರಂಭವಾಗಿದೆ. ಇದನ್ನು ಉಳಿಸಿ ಕೊಳ್ಳುವ, ಉಪಯೋಗ ಮಾಡಿ ಕೊಳ್ಳುವ ನಿಟ್ಟಿನಲ್ಲಿ ಎಲ್ಲರ ಪರಿಶ್ರಮವೂ ಅಗತ್ಯ.

- ಟಿ.ಎಲ್. ಶ್ರೀನಿವಾಸ್