ಕುಶಾಲನಗರ, ಜು. 22: ಸುಮಾರು 4 ದಶಕಗಳಿಂದ ಹಾರಂಗಿ ಯೋಜನೆಯ ನಿರಾಶ್ರಿತರು ಎದುರಿಸುತ್ತಿದ್ದ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಒದಗಿಸಿದ್ದು 254 ಪುನರ್ವಸತಿಗರಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಆರ್. ಸೀತಾರಾಂ ಹೇಳಿದರು. ಸ್ಥಳೀಯ ರೈತ ಸಹಕಾರ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅತ್ತೂರು ಮತ್ತು ಯಡವನಾಡು ಗ್ರಾಮಸ್ಥರಿಗೆ ಆರ್‍ಟಿಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಾರಂಗಿ ಜಲಾಶಯ ನಿರ್ಮಾಣ ವೇಳೆ ಭೂಮಿ ಕಳೆದುಕೊಂಡಿದ್ದವರಿಗೆ ಅತ್ತೂರು ಮತ್ತು ಯಡವನಾಡು ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ ಅದು ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದು ದಾಖಲಾಗಿದ್ದ ಕಾರಣ ಅಲ್ಲಿನ ನಿವಾಸಿಗಳಿಗೆ ಯಾವದೇ ಸೌಲಭ್ಯ ದೊರಕದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.
(ಮೊದಲ ಪುಟದಿಂದ) ಸುದೀರ್ಘ ಕಾಲದ ನಂತರ ಜಿಲ್ಲಾಡಳಿತದ ಅಧಿಕಾರಿಗಳ ಕಾಳಜಿಯೊಂದಿಗೆ ಶಾಶ್ವತ ಪರಿಹಾರ ಒದಗಿದೆ ಎಂದರು.
ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಹೊಂದಾಣಿಕೆ ಯಿಂದ ಕೆಲಸ ಮಾಡಿದ ಕಾರಣ ಇಂದು ಈ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಾಗಿದೆ. ಆರ್‍ಟಿಸಿ ಮತ್ತು ಹಕ್ಕಪತ್ರ ಸದುಪಯೋಗ ಆಗಲಿ. ದುರುದ್ದೇಶದ ಬಳಕೆ ಬೇಡ ಎಂದು ಕಿವಿಮಾತು ಹೇಳಿದರು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಷ್ಮೆ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜಾ, ಉಪವಿಭಾಗಾಧಿಕಾರಿ ನಂಜುಂಡೇಗೌಡ, ಜಿ.ಪಂ. ಸದಸ್ಯರು ಇದ್ದರು.
ಇದೇ ಸಂದರ್ಭ ಗುಂಡುರಾವ್ ಬಡಾವಣೆ ಹಿತರಕ್ಷಣಾ ಸಮಿತಿ ಪ್ರಮುಖರು ಸಚಿವರಿಗೆ ಮನವಿ ಸಲ್ಲಿಸಿ ಬಡಾವಣೆಯಲ್ಲಿ ಹರಾಜುಗೊಂಡ ನಿವೇಶನಗಳನ್ನು ಬಡವರಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸ್ಥಳೀಯ ಕಾಂಗ್ರೆಸ್ ಪ್ರಮುಖರು ಹಾಗೂ ಕೆಲವು ಜನಪ್ರತಿನಿಧಿಗಳು ಸಚಿವರನ್ನು ಭೇಟಿ ಮಾಡಿ ಕುಶಾಲನಗರ ವ್ಯಾಪ್ತಿಯಲ್ಲಿ ಜನಪರ ಕೆಲಸ ಕಾರ್ಯಗಳು ನಡೆಯದಿರುವ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಕುಂದು ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಮನವಿ ಸಲ್ಲಿಸಿದರು.