ಮಡಿಕೇರಿ, ಜು. 23: ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ರಾಷ್ಟ್ರಮಟ್ಟದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸಿಎ-ಸಿಪಿಟಿಯಲ್ಲಿ (ಕಾಮನ್ ಪ್ರೋಫಿಸಿಯೆನ್ಸಿ ಟೆಸ್ಟ್) ಕೊಡಗಿನ ಕುವರಿ ಪಾಸುರ ತವಿಶಿ ದೇಚಮ್ಮ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸಾಧನೆ ತೋರಿದ್ದಾಳೆ.

ಇದು ಪ್ರಥಮ ಹೆಜ್ಜೆಯಾಗಿದ್ದು, 2018ರ ಮೇ ಯಲ್ಲಿ ನಡೆಯಲಿರುವ ಇಂಟರ್ ಮೀಡಿಯೇಟ್ ಪರೀಕ್ಷೆ (ಐಪಿಸಿಸಿ) ಹಾಗೂ ಸಿಎ ಅಂತಿಮ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲಿಯೇ ರ್ಯಾಂಕ್‍ನೊಂದಿಗೇ ಸಾಧನೆ ಮಾಡುವ ನಿಟ್ಟಿನಲ್ಲಿ ಪರಿಶ್ರಮ ಪಡುವದಾಗಿ ತವಿಶಿದೇಚಮ್ಮ ಅಭಿಪ್ರಾಯ ವ್ಯಕ್ತಪಡಿಸಿದಳು. ‘ಶಕ್ತಿ’ಯೊಂದಿಗೆ ತನ್ನ ಸಾಧನೆಯ ಕುರಿತು ಅಭಿಪ್ರಾಯ ಹಂಚಿಕೊಂಡ ತವಿಶಿ ಮುಂದಿನ ಎರಡು ಹಂತಗಳನ್ನು ಉತ್ತಮ ಫಲಿತಾಂಶದೊಂದಿಗೆ ಸಾಧಿಸುವ ಛಲ ಹೊಂದಿರುವದಾಗಿ ಹೇಳಿದರು.

ರಾಷ್ಟ್ರಮಟ್ಟದಲ್ಲಿ 2ನೇ ರ್ಯಾಂಕ್ ಗಳಿಸುವ ನಿರೀಕ್ಷೆ ಮಾಡಿರಲಿಲ್ಲ. ಆದರೆ ತಾನು ವ್ಯಾಸಂಗ ಮಾಡುತ್ತಿದ್ದ ಆಳ್ವಾಸ್ ಸಂಸ್ಥೆಯವರಿಗೆ ಈ ವಿಶ್ವಾಸವಿದ್ದು ಹುರಿದುಂಬಿಸುತ್ತಿದ್ದರು. ಕೋಚಿಂಗ್ ಪಡೆಯುತ್ತಿದ್ದ ಸಂದರ್ಭ ಹಲವು ಪರಿಣತರ ತರಬೇತಿ ಮಾಕ್ ಟೆಸ್ಟ್, ಆನ್‍ಲೈನ್ ಟೆಸ್ಟ್‍ನಿಂದ ಸಮರ್ಥವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಯಿತು ಎಂದ ಆಕೆ ಪಿಯುಸಿಯೊಂದಿಗೆ ಇದನ್ನು ಒಟ್ಟಿಗೆ ಅಭ್ಯಸಿಸಲು ಶ್ರಮ ವಹಿಸಿದ ಕುರಿತು ಸ್ಮರಿಸಿಕೊಂಡಳು. ಪ್ರತಿದಿನ 3 ರಿಂದ 4 ತಾಸು ಅಭ್ಯಾಸ ನಡೆಸುತ್ತಿದ್ದೆ. ತರಗತಿಯ ಪಾಠವನ್ನು ಅಲ್ಲಿಯೇ ಅರ್ಥ ಮಾಡಿಕೊಳ್ಳುತ್ತಿದ್ದುದು ಪೂರಕವಾಯಿತು ಎಂದು ತಿಳಿಸಿದಳು. ಸತತ ಪರಿಶ್ರಮಪಟ್ಟಲ್ಲಿ ಸಾಧನೆ ಸಾಧ್ಯ ಎಂದು ತನ್ನ ಅನುಭವ ಹೇಳಿಕೊಂಡ ತವಿಶಿ ಯಾರೂ ಈ ಸಾಧನೆ ಮಾಡಬಹುದು ಎಂದಳು.

ತಂದೆ - ತಾಯಿ ಆರಂಭದಿಂದಲೂ ನೀಡಿದ ಪ್ರೋತ್ಸಾಹ ಈ ಸಾಧನೆಗೆ ನೆರವಾಯಿತು. ಅವರು ಎಂದೂ ತನಗೆ ಒತ್ತಡ ಹೇರುತ್ತಿರಲಿಲ್ಲ. ‘ಡು ಯುವರ್ ಲೆವಲ್ ಟೆಸ್ಟ್’ ಎಂದಷ್ಟೇ ಹೇಳುತ್ತಿದ್ದರು. ಆದರೆ ಎಲ್ಲಾ ರೀತಿಯಲ್ಲಿ ಉತ್ತೇಜನ ನೀಡಿರುವದಾಗಿ ಸ್ಮರಿಸಿದಳು. 2014ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದ ಈಕೆ. 2017ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾಳೆ. ತವಿಶಿ ಮಡಿಕೇರಿಯ ವಕೀಲ ಪಾಸುರ ಪ್ರೀತಂ ಹಾಗೂ ಹೇಮಾ ಪ್ರೀತಂ ದಂಪತಿಯ ಪುತ್ರಿ.