ಸಿದ್ದಾಪುರ, ಜು. 24: ಪಟ್ಟಣದಲ್ಲಿ ಕಸ ವಿಲೇವಾರಿ ಮಾಡಿ ಗ್ರಾಮಸ್ಥರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿದ್ದ ಗ್ರಾ.ಪಂ ಇದೀಗ ಜೀವನದಿ ಕಾವೇರಿ ಸಮೀಪ ತ್ಯಾಜ್ಯಗಳ ವಿಲೇವಾರಿ ಮಾಡಿರುವದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.ಇತ್ತೀಚೆಗೆ ಸಿದ್ದಾಪುರ ಪಟ್ಟಣದ ವಾಹನ ನಿಲ್ದಾಣದಲ್ಲಿ ಕೊಳೆತ ತ್ಯಾಜ್ಯವನ್ನು ಸುರಿದ ಗ್ರಾ.ಪಂ, ಕೊಳೆತ ತ್ಯಾಜ್ಯದ ದುರ್ನಾತದಿಂದ ಗ್ರಾಮಸ್ಥರು ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಳಿಕ ಎಚ್ಚೆತ್ತುಕೊಂಡ ಗ್ರಾ.ಪಂ ಪಟ್ಟಣದಲ್ಲಿ ಸುರಿದಿದ್ದ ಕಸದ ತ್ಯಾಜ್ಯವನ್ನು ಸ್ಥಳಾಂತರಿಸಿತ್ತು. ಆದರೇ ಇದೀಗ ಕೊಳೆತು ನಾರುತ್ತಿರುವ ಕಸದ ತ್ಯಾಜ್ಯ ವನ್ನು ಕಾವೇರಿ ನದಿಯ ಸಮೀಪದಲ್ಲೇ ವಿಲೇವಾರಿ ಮಾಡಲಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವಿತ್ರವಾದ ನದಿಯ ದಡದಲ್ಲಿ ಕಸವಿಲೇವಾರಿ ಖಂಡನೀಯ. ಅಧ್ಯಕ್ಷರು ಬೇಜಾವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಗ್ರಾ.ಪಂ ಕಸದ ವಿಲೇವಾರಿಗೆ ಸೂಕ್ತ ಜಾಗವನ್ನು ಕಂಡುಹಿಡಿದು ಕಸ ವಿಲೇವಾರಿ ಮಾಡಬೇಕಿದೆ ಇಲ್ಲದಿದ್ದರೆ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವದು ಎಂದು ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ತಿಳಿಸಿದ್ದಾರೆ.