ಸೋಮವಾರಪೇಟೆ, ಜು.23: ಸಮೀಪದ ಬೇಳೂರು ಗ್ರಾಮಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು, ಮನೆಯಂಗಳದಲ್ಲಿ ಬೆಳೆದಿದ್ದ ಬೃಹತ್ ತೆಂಗಿನ ಮರಗಳನ್ನು ನೆಲಸಮ ಗೊಳಿಸಿ, ಕಾಫಿ ತೋಟದ ಗಿಡಗಳನ್ನು ಧ್ವಂಸಗೊಳಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಬೇಳೂರು ಬಾಣೆಗೆ ಒತ್ತಿಕೊಂಡಂತೆ ಇರುವ ಕೆ.ಜಿ. ಸುರೇಶ್ ಅವರಿಗೆ ಸೇರಿದ ವಾಸದ ಮನೆಯ ಮುಂಭಾಗ ಬೆಳೆದಿದ್ದ ಸುಮಾರು 20 ವರ್ಷಕ್ಕೂ ಹಳೆಯ ನಾಲ್ಕು ತೆಂಗಿನ ಮರಗಳನ್ನು ಧ್ವಂಸ ಮಾಡಿರುವ ಕಾಡಾನೆಗಳು, ತೋಟದಲ್ಲಿರುವ ಕಾಫಿ ಗಿಡಗಳನ್ನು ತುಳಿದು ನಾಶಗೊಳಿಸಿವೆ.

ಇಂದು ಮುಂಜಾನೆ 4 ರಿಂದ 5 ಗಂಟೆಯ ಸಮಯದಲ್ಲಿ ಲಗ್ಗೆಯಿಟ್ಟಿರುವ ನಾಲ್ಕೈದು ಕಾಡಾನೆಗಳು ಮನಸೋಯಿಚ್ಛೆ ಸಂಚರಿಸಿದ್ದು, ಈ ಭಾಗದ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಐಗೂರು, ಕಾಜೂರು ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳು ಇದೀಗ ಬೇಳೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಾಪೋಕ್ಲು

ಒಂದೆಡೆ ಮಳೆಯಿಂದಾಗಿ ಗ್ರಾಮೀಣ ಜನರು ನಷ್ಟ ಅನುಭವಿಸುತ್ತಿದ್ದರೆ ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಸಮಸ್ಯೆ ಎದುರಿಸು ವಂತಾಗಿದೆ. ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದ್ದು ಗ್ರಾಮಸ್ಥರು ನಷ್ಟಕ್ಕೊಳಗಾಗಿದ್ದಾರೆ. ನೆಲಜಿ ಗ್ರಾಮದ ಚೆಂಡುಮಾನಿಕೇರಿಯ ಬೆಳೆಗಾರರಾದ ಅಪ್ಪುಮಣಿಯಂಡ ರಘುಸುಬ್ಬಯ್ಯ, ಮೇದಪ್ಪ, ಕೈಬುಲಿರ ಪೊನ್ನಣ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ಕಾಫಿ ತೋಟಗಳಿಗೆ ಧಾಳಿ ಇಡುತ್ತಿರುವ ಕಾಡಾನೆಗಳು ಕಾಫಿ ಅಡಿಕೆ ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಹಾನಿ ಮಾಡಿದೆ. ಇದರಿಂದ ಬೆಳೆಗಾರರಿಗೆ ಭಾರೀ ನಷ್ಟ ಸಂಭವಿಸಿದೆ. ಇತ್ತೀಚೆಗೆ ಕಕ್ಕಬ್ಬೆ ಇಗ್ಗುತ್ತಪ್ಪ ದೇವಾಲಯದ ಸುತ್ತಮುತ್ತ ಹಾನಿಯುಂಟುಮಾಡಿದ್ದ ಕಾಡಾನೆಗಳ ಹಿಂಡು ನೆಲಜಿ ಗ್ರಾಮ ವ್ಯಾಪ್ತಿಯಲ್ಲಿ ಧಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.