ಸೋಮವಾರಪೇಟೆ, ಜು. 23: ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯದ ವಿಸ್ತಾರವನ್ನು ವೃದ್ಧಿಸುವದರಿಂದ ಜೀವ ಸಂಕುಲಕ್ಕೆ ನಷ್ಟವೇ ಹೊರತು ಯಾವದೇ ಲಾಭವಿಲ್ಲ. ಇದು ಹೀಗೆಯೇ ಮುಂದುವರೆದರೆ ಜೀವ ಸಂಕುಲದ ವಿನಾಶ ಖಚಿತ ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕಾಧ್ಯಕ್ಷ ಹಾಗೂ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೊಲೀಸ್ ಇಲಾಖೆ, ತಾಲೂಕು ಪತ್ರಕರ್ತರ ಸಂಘ, ಜೇಸೀ, ರೋಟರಿ ಸಂಸ್ಥೆ, ಜಾನಪದ ಪರಿಷತ್ ಆಶ್ರಯದಲ್ಲಿ ಎಸ್‍ಜೆಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಅರಣ್ಯ ಸಂವರ್ಧನಾ ಮತ್ತು ಶಾಲಾವನ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ರಕ್ಷಿಸುವಲ್ಲಿ ಇಲಾಖೆ ವಿಫಲವಾಗಿದೆ. ವನ್ಯಪ್ರಾಣಿಗಳು ಆಹಾರ ಕೊರತೆಯಿಂದಾಗಿ ನಾಡಿಗೆ ಲಗ್ಗೆಯಿಡುತ್ತಿವೆ. ವಾತಾವರಣವನ್ನು ತಿಳಿಗೊಳಿಸಿ, ವನ್ಯಪ್ರಾಣಿಗಳನ್ನು ಉಳಿಸುವ ಮರಗಿಡಗಳನ್ನು ನೆಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದರು. ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಸಂಸ್ಥೆಯಿಂದ ತಾಲೂಕಿನಲ್ಲಿ 5 ಸಾವಿರ ಬೀಜದುಂಡೆÉಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರಲ್ಲದೆ, ಕೆರೆಗಳ ಒತ್ತುವರಿ ಮತ್ತು ನಾಶವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಕೆರೆಗಳನ್ನು ಉಳಿಸಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ರೂ. 5 ಕೋಟಿ ವ್ಯಯಿಸುತ್ತಿದೆ ಎಂದರು.

ಜಾನಪದ ಪರಿಷತ್ ಹೋಬಳಿ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಣ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ರೋಟರಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಪಟೇಲ್, ಜೇಸೀ ಅಧ್ಯಕ್ಷ ಮನೋಹರ್, ವ್ಯವಸ್ಥಾಪನಾ ಸಮಿತಿಯ ಗಿರೀಶ್, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ಯೋಜನೆಯ ಮೇಲ್ವಿಚಾರಕ ರಮೇಶ್, ಶಾಲಾ ಮುಖ್ಯೋಪಾಧ್ಯಾಯ ರುದ್ರೇಶ್ ಉಪಸ್ಥಿತರಿದ್ದರು.

ಯೋಜನೆಯ ವತಿಯಿಂದ ತಯಾರಿಸಲಾದ ಬೀಜದುಂಡೆಗಳನ್ನು ಸದಸ್ಯರುಗಳಿಗೆ ವಿತರಿಸಲಾಯಿತು. ನಂತರ ಶಾಲಾ ಆವರಣದ ಸುತ್ತ ವಿವಿಧ ಸಸಿಗಳನ್ನು ನೆಡಲಾಯಿತು.