ಸೋಮವಾರಪೇಟೆ, ಜು. 24: ‘ಕೊಡಗಿನಲ್ಲಿ ಪೊಲೀಸ್ ಇಲಾಖೆ ಬಲಿಷ್ಠವಾಗಿದೆ. ಕಾನೂನು ಮೀರಿದ್ರೆ ಬಲಿ ಹಾಕ್ತೀವಿ. ಕಾನೂನನ್ನು ಗೌರವಿಸುವವರಿಗೆ ಮಾತ್ರ ಪೊಲೀಸರು ಮಿತ್ರರು. ಗೂಂಡಾಗಳನ್ನು ಯಾವದೇ ಮುಲಾಜಿಲ್ಲದೇ ಮಟ್ಟ ಹಾಕ್ತೀವಿ. ಗಲಾಟೆ ಮಾಡಿದ್ರೆ ಯಾವದೇ ಕಾರಣಕ್ಕೂ ಸಹಿಸೋದಿಲ್ಲ, ಶಾಂತಿ ಸೌಹಾರ್ಧತೆಯ ಕೊಡಗು ನಮ್ಮ ಕನಸು’ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಖಡಕ್ ಮಾತುಗಳನ್ನು ಹೇಳಿದರು.ಸೋಮವಾರಪೇಟೆ ಪೊಲೀಸ್ ಠಾಣೆಯ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸುಧಾರಿತ ಗಸ್ತು ವ್ಯವಸ್ಥೆಯ ಠಾಣಾ ಮಟ್ಟದ ಬೀಟ್ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಕಾನೂನು ಗೌರವಿಸುವವರಿಗೆ ಮಾತ್ರ ನಾವುಗಳು ಜನಮಿತ್ರ ಪೊಲೀಸ್;ಗೂಂಡಾಗಳಿಗೆ ಅಲ್ಲ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆ ದುರ್ಬಲ ವಾಗಿಲ್ಲ. ಗಲಭೆಕೋರರನ್ನು ಮುಲಾಜಿಲ್ಲದೇ ಮಟ್ಟ ಹಾಕ್ತೀವಿ. ಕಾವೇರಿ ತಾಯಿಯ ಆಶೀರ್ವಾದ ದೊಂದಿಗೆ ಕೊಡಗಿನಲ್ಲಿ ಶಾಂತಿ ಸ್ಥಾಪಿಸುವ ಕನಸ್ಸು ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಇಲಾಖೆ ಕೆಲಸಮಾಡುತ್ತಿದೆ. ಇದು ಕೇವಲ ಭಾಷಣಗಳಲ್ಲಿ ಮಾತ್ರ ಅಲ್ಲ; ಕಾರ್ಯರೂಪಕ್ಕೂ ತರುತ್ತಿದ್ದೇವೆ’ ಎಂದು ವರಿಷ್ಠಾಧಿಕಾರಿಗಳು ಜನರಲ್ಲಿ ಭರವಸೆ ಮೂಡಿಸುವ ಮಾತು ಗಳನ್ನಾಡಿದರು.

ಕೊಡಗು ಜಿಲ್ಲೆಯಲ್ಲಿ 5.50ಲಕ್ಷ ಜನಸಂಖ್ಯೆಯಿದ್ದು, 23,500 ಮಂದಿಯನ್ನು ಬೀಟ್ ಸದಸ್ಯರನ್ನಾಗಿ ನೇಮಿಸಿದ್ದೇವೆ. ಒಂದು ಬೀಟ್‍ನಲ್ಲಿ 45 ಸದಸ್ಯರು ಇರುತ್ತಾರೆ. ಭೌಗೋಳಿಕ ವಿಸ್ತೀರ್ಣವನ್ನು ಪರಿಗಣನೆಗೆ ತೆಗೆದು ಕೊಂಡು ಓರ್ವ ಸಿಬ್ಬಂದಿಯನ್ನು ಬೀಟ್ ಪೊಲೀಸ್ ಎಂದು ನಿಯೋಜಿ ಸಲಾಗಿದ್ದು, ಆ ಗ್ರಾಮದ ಕಾನೂನು ಸುವ್ಯವಸ್ಥೆಯ ಸಂಪೂರ್ಣ ಮಾಹಿತಿ ಬೀಟ್ ಪೊಲೀಸ್‍ಗೆ ಇರಲಿದೆ ಎಂದರು.

ಈ ಹಿಂದೆ ಸಿಬ್ಬಂದಿಗಳು ಸೀಮಿತ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಅವರುಗಳ ಜವಾಬ್ದಾರಿಯೂ ಹೆಚ್ಚಿದ್ದು, ಗ್ರಾಮದಲ್ಲಿನ ವಿವಿಧ ಅರ್ಜಿಗಳ ವಿಚಾರಣೆ, ಗನ್ ಲೈಸೆನ್ಸ್, ಪಾಸ್‍ಪೋರ್ಟ್, ಗುಣನಡತೆ ಪತ್ರ, ಕ್ರಿಮಿನಲ್ ಮತ್ತು ರೌಡಿಶೀಟರ್‍ಗಳ ಚಲನವಲನಗಳ ಮಾಹಿತಿ, ಕಮ್ಯೂನಲ್ ಗೂಂಡಾಗಳ ಮಾಹಿತಿ, ಜೂಜಾಟ, ಅನೈತಿಕ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಿದ್ದಾರೆ. ಇವರು ಗಳೊಂದಿಗೆ ಬೀಟ್ ಸದಸ್ಯರು ಕೈಜೋಡಿಸಲಿದ್ದಾರೆ ಎಂದರು.

(ಮೊದಲ ಪುಟದಿಂದ) ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ನಾವುಗಳು ಸಮವಸ್ತ್ರ ಧರಿಸಿದ ನಾಗರಿಕರಾಗಿದ್ದು, ನಾಗರಿಕರು ಸಮವಸ್ತ್ರ ಧರಿಸದೇ ಮಫ್ತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ ರಾಗಿದ್ದಾರೆ. ಈ ನಿಟ್ಟಿನಲ್ಲಿ ಜನರೂ ಸಹ ತಮ್ಮ ಜವಾಬ್ದಾರಿ ಅರಿತು ಪೊಲೀಸರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಂತರ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವಂತೆ ಕಾನೂನು ಸುವ್ಯವಸ್ಥೆಯ ಬಗ್ಗೆ ದೀರ್ಘ ಸಮಾಲೋಚನೆ ನಡೆಯಿತು. ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತರಿಸಿದರು.

ನಗರದ ಆಟೋ ಚಾಲಕ ಹಸನಬ್ಬ ಮಾತನಾಡಿ, ಸೋಮವಾರಪೇಟೆ ಪೊಲೀಸ್ ಠಾಣೆಗೆ ನೂತನ ಪೊಲೀಸ್ ಜೀಪ್ ಕಲ್ಪಿಸುವಂತೆ ಮನವಿ ಮಾಡಿದರು. ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಕಕ್ಕೆಹೊಳೆ ಸಮೀಪ ಇಸ್ಪೀಟ್ ಜೂಜಿನ ಕ್ಲಬ್ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಮತ್ತೆ ಬೇರೆಡೆ ತೆರೆಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದರು.

ಇದರೊಂದಿಗೆ ಆಂಜನೇಯ ದೇವಾಲಯ, ಜ್ಞಾನ ವಿಕಾಸ, ಓಎಲ್‍ವಿ ಶಾಲೆ, ಸಂತ ಜೋಸೆಫರ ವಿದ್ಯಾಸಂಸ್ಥೆ, ಪೊಲೀಸ್ ವೃತ್ತನಿರೀಕ್ಷಕ ಕಚೇರಿ, ಪ್ರವಾಸಿ ಮಂದಿರ ಇರುವ ಪ್ರದೇಶದಲ್ಲಿ ನೂತನವಾಗಿ ಬಾರ್ ತೆರೆಯಲು ಯತ್ನಿಸುತ್ತಿದ್ದು, ಇದಕ್ಕೂ ಅವಕಾಶ ನೀಡಬಾರದು ಎಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವದಾಗಿ ಎಸ್.ಪಿ. ಭರವಸೆ ನೀಡಿದರು.

ಅಸ್ಸಾಂ, ಗುಜರಾತ್ ಸೇರಿದಂತೆ ಹೊರ ರಾಜ್ಯಗಳಿಂದ ಸಾವಿರಾರು ಮಂದಿ ಕೊಡಗಿಗೆ ಆಗಮಿಸಿ ಇಲ್ಲಿನ ತೋಟದ ಮನೆಗಳಲ್ಲಿ ನೆಲೆಸಿದ್ದು, ಇವರುಗಳಿಂದ ಕೊಡಗಿನ ಭದ್ರತೆಗೆ ಆತಂಕ ಎದುರಾಗಿದೆ ಎಂದು ಡಿಎಸ್‍ಎಸ್ ಮುಖಂಡ ನಿರ್ವಾಣಪ್ಪ ಹೇಳಿದರು. ಈ ಬಗ್ಗೆ ಇಲಾಖೆ ಗಮನಹರಿಸಿದ್ದು, ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಬಜೆಗುಂಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್ ಮನವಿ ಮಾಡಿದರು. ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಸೋಮವಾರ ಪೇಟೆಯಲ್ಲಿ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಇದನ್ನು ತಡೆಯಲು ಪೊಲೀಸ್ ತಂಡ ರಚನೆಯಾಗಬೇಕು. ಐಗೂರು-ಹೊಸತೋಟ ವ್ಯಾಪ್ತಿಯಲ್ಲಿ ಆಗಾಗ್ಗೆ ಗಲಭೆ ಸಂಭವಿಸುತ್ತಿದ್ದು, ಇಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಜೆಡಿಎಸ್ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಗಮನ ಸೆಳೆದರು.

ಐಪಿಎಲ್ ಕ್ರಿಕೆಟ್ ಪಂದ್ಯಾಟ ಸಂದರ್ಭ ಬೆಟ್ಟಿಂಗ್ ದಂಧೆ ಹೆಚ್ಚಿರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿಗಣೇಶ್ ಮನವಿ ಮಾಡಿದರು. ವಾಹನಗಳ ಹಾರನ್‍ಗಳಿಂದ ಶಬ್ದ ಮಾಲಿನ್ಯವಾಗುತ್ತಿದ್ದು, ಕರ್ಕಶ ಶಬ್ದ ಹೊರಹಾಕುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೋಟರಿ ಸಂಸ್ಥೆಯ ವಿಜೇತ್ ಒತ್ತಾಯಿಸಿದರು. ನಗರ ಪ್ರದೇಶದೊಂದಿಗೆ ಪೊಲೀಸ್ ಠಾಣೆಯ ಗಡಿಭಾಗದವರೆಗೂ ಬೀಟ್ ವ್ಯವಸ್ಥೆಯನ್ನು ವಿಸ್ತರಿಸಬೇಕೆಂದು ಕಾಫಿ ಬೆಳೆಗಾರರ ಸಂಘದ ಎ. ಲವ ಮನವಿ ಮಾಡಿದರು.

ನಗರದಲ್ಲಿ ನಿಲುಗಡೆಯಾಗುವ ವಾಹನಗಳಿಂದ ಪೆಟ್ರೋಲ್ ಕದಿಯುವ ತಂಡ ಸೃಷ್ಟಿಯಾಗಿದೆ ಎಂದು ಪ.ಪಂ. ಸದಸ್ಯೆ ಲೀಲಾ ನಿರ್ವಾಣಿ ಹೇಳಿದರು. ಜೇಸೀ ಸಂಸ್ಥೆಯ ಗಿರೀಶ್ ಮಾತನಾಡಿ, ಸಂತೆ ದಿನವಾದ ಸೋಮವಾರದಂದು ಸಫಾಲಿ ಸಭಾಂಗಣದ ಮುಂಭಾಗವಿರುವ ಏರು ರಸ್ತೆಯನ್ನು ಏಕಮುಖ ಸಂಚಾರ ಮಾಡಬೇಕು ಎಂದು ಸಲಹೆ ನೀಡಿದರು.

ನಗರಕ್ಕೆ ಆಗಮಿಸುವ ಸಾರ್ವ ಜನಿಕರ ವಾಹನಗಳ ಪಾರ್ಕಿಂಗ್‍ಗೆ ಸ್ಥಳಾವಕಾಶದ ಕೊರತೆಯಿದೆ ಎಂದು ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಅಳಲು ತೋಡಿಕೊಂಡರು. ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಗಿರೀಶ್ ಮಾತನಾಡಿ, ಗ್ರಾಮೀಣ ಭಾಗದ ಹಲವಷ್ಟು ಅಂಗಡಿಗಳು, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಾದುದು ಅಬಕಾರಿ ಇಲಾಖೆಯ ಕರ್ತವ್ಯ. ಒಂದೊಮ್ಮೆ ಅವರು ವಿಫಲವಾದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಭರವಸೆ ನೀಡಿದರು.

ಪ.ಪಂ. ಸದಸ್ಯ ಸುರೇಶ್ ಮಾತನಾಡಿ, ನಗರದ ಕೆಲವು ಬಾರ್‍ಗಳ ಎದುರು ಮದ್ಯಪಾನ ಮಾಡಿ ಅಸಭ್ಯ ವರ್ತನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಪ್ರಾಪ್ತ ವಯಸ್ಕರು ಕಾನೂನು ಬಾಹಿರವಾಗಿ ವಾಹನ ಗಳನ್ನು ಚಲಾಯಿಸುತ್ತಿದ್ದಾರೆ. ಸಣ್ಣ ಮಕ್ಕಳಿಗೆ ವಾಹನ ನೀಡುವ ಪೋಷಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೈಟೆಕ್ ಮಾರುಕಟ್ಟೆಯ ಒಳಗೆ ಅಕ್ರಮ ಜೂಜಾಟ ನಡೆಯುತ್ತಿದ್ದರೂ ಪೊಲೀಸರು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಗಮನ ಸೆಳೆದರು. ಸ್ಥಳೀಯ ಪೊಲೀಸರು ವಿಫಲರಾದಲ್ಲಿ ತನ್ನ ಗಮನಕ್ಕೆ ತರುವಂತೆ ಎಸ್.ಪಿ. ಸಲಹೆ ನೀಡಿದರು.

ಹಾಸನ ಭಾಗದಿಂದ ಲಾರಿಗಳಲ್ಲಿ ಕಲ್ಲು ಮತ್ತು ಮರಳನ್ನು ಸಾಗಿಸಲಾಗುತ್ತಿದ್ದು, ಟಾರ್ಪಲ್ ಕಟ್ಟದೇ ಇರುವದರಿಂದ ರಸ್ತೆಯ ಮೇಲೆ ಚೆಲ್ಲಿ ರಸ್ತೆ ಹಾಳಾಗುತ್ತಿದೆ. ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಣಗೂರು ಗ್ರಾ.ಪಂ. ಮಾಜೀ ಅಧ್ಯಕ್ಷ ಚಂದ್ರಶೇಖರ್ ಸಭೆಯಲ್ಲಿ ಹೇಳಿದರು.

ಜನಸಾಮಾನ್ಯರಿಗೆ ಅವಶ್ಯಕವಾದ ಮರಳು ಸಾಗಾಟಕ್ಕೆ ಇಲಾಖೆ ತಡೆಯೊಡ್ಡಬಾರದು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮನವಿ ಮಾಡಿದರು. ಮರಳು ದಂಧೆಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೇ ಹೊರತು ಅವಶ್ಯಕತೆಗಳಿಗೆ ಅಡ್ಡಿಪಡಿಸುತ್ತಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.

ಪೊಲೀಸ್ ಠಾಣೆಗೆ ತೆರಳುವ ರಸ್ತೆಯಲ್ಲಿರುವ ಲಾರಿ, ವ್ಯಾನ್ ಮತ್ತು ಹಳೆಯ ಟ್ಯಾಂಕ್‍ಗಳನ್ನು ತೆರವುಗೊಳಿಸಿದರೆ ಪಾರ್ಕಿಂಗ್‍ಗೆ ಸ್ಥಳಾವಕಾಶ ಸಿಗಲಿದೆ ಎಂದು ಚೌಡ್ಲು ಗ್ರಾ.ಪಂ. ಸದಸ್ಯ ನತೀಶ್ ಮಂದಣ್ಣ ಹೇಳಿದರು.

ಜಿಲ್ಲೆಯ ವೀರಾಜಪೇಟೆ, ಗೋಣಿಕೊಪ್ಪ, ಕುಶಾಲನಗರದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‍ಗಳನ್ನು ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಡಗಿಗೆ ಸಂಬಂಧಿಸಿದಂತೆ 500 ಸಿ.ಸಿ. ಕ್ಯಾಮೆರಾಗಳ ಅಗತ್ಯವಿದೆ. ಜಿಲ್ಲೆಯ ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದಿಂದ 70ಲಕ್ಷ ಅನುದಾನ ಬಂದಿದ್ದು, ಬ್ಯಾರಿಕೇಡ್ ಸೇರಿದಂತೆ ಇತರ ಪರಿಕರಗಳನ್ನು ಖರೀದಿಸಲಾಗಿದೆ ಎಂದರು.

ಸಭೆಯಲ್ಲಿ ಪೊಲೀಸ್ ಉಪ ಅಧೀಕ್ಷಕ ಸಂಪತ್‍ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಪರಶಿವ ಮೂರ್ತಿ, ಪೊಲೀಸ್ ಇನ್ಸ್‍ಪೆಕ್ಟರ್ ಮಹೇಶ್ ಅವರುಗಳು ಉಪಸ್ಥಿತರಿ ದ್ದರು. ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮ ಮುಖಂಡರು, ಜನಪ್ರತಿನಿಧಿಗಳು, ಬೀಟ್ ಸದಸ್ಯರುಗಳು ಭಾಗವಹಿಸಿದ್ದರು.

ಕುಶಾಲನಗರ : ಕೊಡಗು ಜಿಲ್ಲೆ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ನಾಗರೀಕರ ಸಹಕಾರ ಅತಿ ಪ್ರಮುಖವಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಸುಧಾರಿತ ಬೀಟ್ ವ್ಯವಸ್ಥೆಯ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸುಧಾರಿತ ಬೀಟ್ ವ್ಯವಸ್ಥೆ ಸಂಪರ್ಕ ಸೇತುವಾಗಿ ಕಾರ್ಯನಿರ್ವ ಹಿಸಲಿದೆ. ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸರೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಕುಶಾಲನಗರ ಗ್ರಾಮಾಂತರ, ಟೌನ್, ಸುಂಟಿಕೊಪ್ಪ ಗ್ರಾಮಾಂತರ ವ್ಯಾಪ್ತಿಯ ಬೀಟ್ ವ್ಯವಸ್ಥೆಯ ಸದಸ್ಯರುಗಳು ಈ ಸಂದರ್ಭ ತಮ್ಮ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ರಾಜೇಂದ್ರ ಪ್ರಸಾದ್ ನಾಗರೀಕರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಡಿವೈಎಸ್ಪಿ ಸಂಪತ್‍ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಮಹೇಶ್, ಠಾಣಾಧಿಕಾರಿ ಗಳಾದ ಜೆ.ಇ.ಮಹೇಶ್, ಜಗದೀಶ್, ಹೆಚ್.ಎಸ್.ಭೋಜಪ್ಪ ಮತ್ತಿತರರು ಇದ್ದರು. ಗ್ರಾಮಾಂತರ ವ್ಯಾಪ್ತಿಯ ಬೀಟ್ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶನಿವಾರಸಂತೆ : ಒಬ್ಬ ಠಾಣಾಧಿಕಾರಿಗೆ ಇರುವ ಅಧಿಕಾರವೇ ಒರ್ವ ಕಾನ್ಸಟೇಬಲ್ ಹಾಗೂ ಹೆಡ್ ಕಾನ್ಸ್‍ಟೇಬಲ್ ಅವರಿಗೂ ಇರಬೇಕೆಂಬ ಉದ್ದೇಶದಿಂದಲೇ ಹಳ್ಳಿಗಳಲ್ಲಿ ಬೀಟ್ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ಸಮೀಪದ ಗುಡುಗಳಲೆಯ ಆರ್.ಎ. ಕಲ್ಯಾಣ ಮಂಟಪದಲ್ಲಿ ಶನಿವಾಸಂತೆ ಪೊಲೀಸ್ ಠಾಣಾ ವತಿಯಿಂದ ಸೋಮವಾರ ನಡೆದ ಸುಧಾರಿತ ಗಸ್ತು ವ್ಯವಸ್ಥೆಯ ಠಾಣಾ ವ್ಯಾಪ್ತಿಯ ಬೀಟ್ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವದೇ ಗ್ರಾಮಕ್ಕೆ ನೇಮಕವಾಗುವ ಕಾನ್ಸಟೇಬಲ್, ಹೆಡ್ ಕಾನ್ಸಟೇಬಲ್ ಅವರುಗಳಿಗೆ ಗ್ರಾಮದ ಸಂಪೂರ್ಣ ಅಧಿಕಾರ ಇರುತ್ತಿದೆ. ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯುವ ಸಭೆಯಲ್ಲಿ ಅಪರಾಧ ತಡೆಯಲು ಸಂಚಾರ ವ್ಯವಸ್ಥೆ ಸುಧಾರಿಸಲು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಗ್ರಾಮಸ್ಥರು, ಪೊಲೀಸರ ಜೊತೆ ಸಹಕರಿಸಬೇಕು. ಆಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂದು ಅವರು ತಿಳಿಸಿದರು.

ನಿಲುವಾಗಿಲು ಗ್ರಾಮದ ಕೃಷಿಕ ಸೋಮಪ ಮಾತನಾಡಿ, ಕೊಡ್ಲಿಪೇಟೆ ಕೊಡಗು ಜಿಲ್ಲೆಯ ಗಡಿ ಭಾಗವಾಗಿದ್ದು, ನೆರೆ ಜಿಲ್ಲೆಗಳಿಂದ ಜನ, ವಾಹನ ಸಂಚಾರ ಅಧಿಕವಾಗಿರುತ್ತದೆ. ಪೊಲೀಸ್ ಸಿಬ್ಬಂದಿ ಕೊರತೆ ಇರುವದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾಗಿರುತ್ತದೆ. ಆದ್ದರಿಂದ ಕೊಡ್ಲಿಪೇಟೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಕೊಡ್ಲಿಪೇಟೆಯ ಕೆಂಚೇಶ್ವರ ಮಾತನಾಡಿ, ಬಡವರು ಮನೆ ಕಟ್ಟಲು ಮರಳಿನ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರೆ, ಕಲ್ಲಳ್ಳಿಯ ಧರ್ಮ, ಕೊಡ್ಲಿಪೇಟೆಯಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣದ ಸಮಸ್ಯೆ ಪರಿಹಾರವಾಗಬೇಕೆಂದರು.

ಗ್ರಾ.ಪಂ. ಪ್ರತಿನಿಧಿಗಳು, ತಾ.ಪಂ. ಸದಸ್ಯ ಕುಶಾಲಪ್ಪ, ಪ್ರಮುಖರಾದ ರಾಜಮ್ಮ ರುದ್ದಯ್ಯ, ಹೆಚ್.ಬಿ. ಜಯಮ್ಮ, ಶರತ್ ಶೇಖರ್, ಹನೀಫ್, ಡಿ.ಜೆ. ಈರಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ದಿನೇಶ್, ಟಿ.ಟಿ. ರಂಗಸ್ವಾಮಿ, ಮಹಮ್ಮದ್ ಪಾಶಾ, ಜಗನ್‍ಪಾಲ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸೋಮವಾರಪೇಟೆ ಉಪವಿಭಾಗ ಕುಶಾಲನಗರದ ಪೊಲೀಸ್ ಉಪಾಧೀಕ್ಷ ಸಿ. ಸಂಪತ್‍ಕುಮಾರ್, ವೃತ್ತನಿರೀಕ್ಷಕ ಎಸ್. ಪರಶಿವಮೂರ್ತಿ, ಸೋಮವಾರಪೇಟೆ ಡಿ.ಸಿ.ಪಿ. ಇನ್ಸ್‍ಪೆಕ್ಟರ್ ಮಹೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಜಯಕುಮಾರ್ ಸ್ವಾಗತಿಸಿ, ವಂದಿಸಿದರು.