ಸೋಮವಾರಪೇಟೆ, ಜು. 24: ತಾಲೂಕಿನ ಪುಷ್ಪಗಿರಿ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸಿರುವ ಕ್ರಮಕ್ಕೆ ಪುಷ್ಪಗಿರಿ ತಟದಲ್ಲಿ ವಾಸವಿರುವ ವಿವಿಧ ಗ್ರಾಮಗಳ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣ ಘೋಷಣೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ತಾಲೂಕು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಳೆದ ಕೆಲ ದಿನಗಳ ಹಿಂದೆ ಪುಷ್ಪಗಿರಿ ಮೂಲ ನಿವಾಸಿಗಳ ಸಂಘದ ಹೆಸರಿನಲ್ಲಿ ಕೆಲವರು ಸೂಕ್ಷ್ಮ ಪರಿಸರ ತಾಣ ಘೋಷಣೆಗೆ ಬೆಂಬಲ ವ್ಯಕ್ತಪಡಿಸುವ ಅರ್ಥದಲ್ಲಿ ಪ್ರತಿಭಟಿಸಿ ಮನವಿ ಸಲ್ಲಿಸಿದ್ದು, ಇದಕ್ಕೆ ಯಾವದೇ ಮಾನ್ಯತೆ ನೀಡಬಾರದು. ನಾವುಗಳು ತಲತಲಾಂತರದಿಂದ ಈ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದು, ಸರ್ಕಾರದ ಈ ಕ್ರಮದಿಂದ ನಮ್ಮ ಬದುಕಿಗೆ ಸಂಚಕಾರ ಎದುರಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದರು.

ಪುಷ್ಪಗಿರಿ ಬೆಟ್ಟಶ್ರೇಣಿ ಸೇರಿದಂತೆ ಗ್ರಾಮ ವ್ಯಾಪ್ತಿಯಲ್ಲಿ ಪರಿಸರವನ್ನು ಅನಾದಿಕಾಲದಿಂದಲೂ ಸಂರಕ್ಷಿಸಿ ಕೊಂಡೇ ಬರಲಾಗುತ್ತಿದೆ. ನಾವುಗಳ್ಯಾರೂ ಪರಿಸರಕ್ಕೆ ಮಾರಕವಾಗಿ ಬದುಕು ನಡೆಸುತ್ತಿಲ್ಲ. ಹವಾಮಾನ ವೈಪರೀತ್ಯದ ನಡುವೆಯೂ ಸಂಕಷ್ಟದಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮನ್ನು ಸೂಕ್ಷ್ಮ ಪರಿಸರ ತಾಣದ ಹೆಸರಿನಲ್ಲಿ ಇನ್ನಷ್ಟು ಶೋಷಣೆ ಮಾಡಲು ಸರ್ಕಾರ ಹೊರಟಿರುವದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಇದೀಗ ಪುಷ್ಪಗಿರಿ ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿರುವ 8 ಗ್ರಾಮಗಳನ್ನು ತಕ್ಷಣವೇ ವರದಿಯಿಂದ ಕೈಬಿಡಬೇಕು. ತಪ್ಪಿದಲ್ಲಿ ಈ ಭಾಗದ ಮಂದಿ ನಿರಂತರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕುಮಾರಳ್ಳಿ ಗ್ರಾಮಾಧ್ಯಕ್ಷ ಎ.ಕೆ. ಚಂಗಪ್ಪ ಎಚ್ಚರಿಸಿದರು. ಈ ಸಂಬಂಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಮಹೇಶ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಪುಷ್ಪಗಿರಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ಗ್ರಾ.ಪಂ. ಸದಸ್ಯ ಮಾಚಯ್ಯ, ಕುಡಿಗಾಣ ಗ್ರಾಮಾಧ್ಯಕ್ಷ ಡಿ.ಕೆ. ಈಶ್ವರ್, ಬೀದಳ್ಳಿ ಗ್ರಾಮಾಧ್ಯಕ್ಷ ಟಿ.ಪಿ. ನಿಂಗಪ್ಪ, ಪ್ರಮುಖರಾದ ದೇಶ್‍ರಾಜ್, ಉದಯ, ಸುಧಿನ್, ವೆಂಕಟೇಶ್, ಎಂ.ಟಿ. ದಿನೇಶ್, ಡಿ.ಬಿ. ವಿಜಯ್ ಸೇರಿದಂತೆ ಇತರರು ಉಪಸ್ಥಿತರಿದ್ದರು.