*ಗೋಣಿಕೊಪ್ಪಲು, ಜು. 24: ತಿತಿಮತಿ, ದೇವರಪುರ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಮದ್ಯದಂಗಡಿಗಳು ಮುಚ್ಚಿದ ಹಿನ್ನಲೆ ಅಕ್ರಮ ಮದ್ಯ ಮಾರಾಟ ದಂಧೆ ಕೋರರು ಹೆಚ್ಚಾಗಿ ಹುಟ್ಟಿಕೊಂಡಿದ್ದಾರೆ. ತಿತಿಮತಿ ಭಾಗದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಕಾರ್ಮಿಕರು ತಮ್ಮ ದಿನಗೂಲಿಯನ್ನು ಸಹ ಮದ್ಯಕ್ಕಾಗಿ ಕಳೆದುಕೊಂಡು ಬರಿಗೈಯಲ್ಲಿ ಮನೆಗೆ ತೆರಳುವದು ಸಹಜವಾಗಿದೆ.

ಮದ್ಯದ ಬೆಲೆಗಿಂತ ಅಧಿಕ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಈ ಭಾಗದಲ್ಲಿ ಮದ್ಯದಂಗಡಿಗಳಲ್ಲಿ ಕ್ವಾಟರ್ ಎಂ.ಸಿ.ಬಿ.ಗೆ 140 ರೂ. ಬೆಲೆ ಇದ್ದು, ಈಗ ಹೆಚ್ಚುವರಿಯಾಗಿ 200 ರೂ.ಗೆ. ಮಾರಾಟವಾಗುತ್ತಿದೆ. ಒ.ಸಿ., ಒ.ಟಿ. ಕೊಡೇಸ್, ಸಿಲ್ವರ್ ಕಪ್, 8 ಪಿ.ಎಂ, ಚಾಯ್ಸ್, ಬಿಜಾಯಿಸ್, ಬೆಂಗಳೂರು ಮಾಲ್ಟ್ ಬ್ರಾಂಡ್‍ಗಳು ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಮದ್ಯ ಪ್ರೀಯರಿಗೆ ಇದು ದೊಡ್ಡ ಹೊರೆಯಾದರೂ ವ್ಯಸನಕ್ಕೆ ಬಲಿಯಾದ ಮಂದಿ ಅಧಿಕ ಹಣ ನೀಡಿಯೇ ಸೇವನೆ ಮಾಡುತ್ತಿದ್ದಾರೆ. ಈ ನೆಪದಡಿಯಲ್ಲಿ ತಿತಿಮತಿ, ದೇವರಪುರ ಭಾಗಗಳಲ್ಲಿ ಸಂಜೆಯಾಗುತ್ತಿದ್ದಂತೆ ಮದ್ಯ ದಂಧೆ ಆಟೋ, ಜೀಪ್, ಕಾರುಗಳಲ್ಲಿ ರಸ್ತೆ ಬದಿಯೇ ನಿರ್ಭಯದಿಂದ ಮಾರಾಟ ಮಾಡಲಾಗುತ್ತಿದೆ.

(ಮೊದಲ ಪುಟದಿಂದ) ಅಲ್ಲದೇ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳಲ್ಲೂ ಮದ್ಯ ಮಾರಾಟ ವಿಸ್ತಾರಗೊಂಡಿದೆ.

ತಿತಿಮತಿ ಭಾಗದಲ್ಲಿ ಮದ್ಯದಂಗಡಿ ಮುಚ್ಚಿದರಿಂದ ಸಮೀಪದ ಬಾಳೆಲೆ, ಪೊನ್ನಂಪೇಟೆ, ವೀರಾಜಪೇಟೆಗೆ ಮದ್ಯಕ್ಕಾಗಿ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದನ್ನೆ ಬಂಡವಾಳವಾಗಿಸಿಕೊಂಡವರು ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮೂಲಕ ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆ ಹೆಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ, ವಿವಿಧ ಸಂಘಟನೆಗಳ ಮೂಲಕ ಪ್ರತಿಭಟನೆ ನಡೆಸಲಾಗುವದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

-ಎನ್.ಎನ್.ದಿನೇಶ್