ಕೂಡಿಗೆ, ಜು. 23: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೆರೆಕೊಪ್ಪಲು ಗ್ರಾಮದ ಸುಮಾರು 45 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಸಮೀಕ್ಷೆ ಕಾರ್ಯ ನಡೆಯಿತು.

ಚಿಕ್ಕತ್ತೂರು (ಕೆರೆಕೊಪ್ಪಲು) ಪ್ರದೇಶದ ಸರ್ಕಾರಿ ಭೂ ಪ್ರದೇಶದಲ್ಲಿ ವಾಸವಾಗಿರುವ ಸುಮಾರು 45 ಕುಟುಂಬಗಳು ಸುಮಾರು 30 ವರ್ಷಗಳಿಂದ ಮೂಲಭೂತ ಸೌಲಭ್ಯ ಪಡೆದುಕೊಂಡು ಮತದಾರರ ಪಟ್ಟಿಯಲ್ಲಿ ಮತದಾರರೂ ಆಗಿದ್ದರೂ ಅತಂತ್ರ ಬದುಕನ್ನು ಸಾಗಿಸುತ್ತಿದ್ದರು. ಅವರ ಅನೇಕ ದಿನಗಳ ಬೇಡಿಕೆಯ ನಿವೇಶನ ಹಕ್ಕುಪತ್ರಗಳನ್ನು ಕೊಡುವದಕ್ಕೆ ಪರಿಶೀಲನೆ ನಡೆಸಲು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಯಿತು.

ಚಿಕ್ಕತ್ತೂರು (ಕೆರೆಕೊಪ್ಪಲು) ಭಾಗದ ಸುಮಾರು 45 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಬೇಕೆಂದು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆ ಹಿನ್ನೆಲೆ ಕಾರ್ಯ ನಿರ್ವಾಹಣಾಧಿ ಕಾರಿಗಳ ಹೆಸರಿನಲ್ಲಿ ಆರ್.ಟಿ.ಸಿ. ಆಗಿದೆ. ಅದರಲ್ಲಿ 2.5 ಏಕರೆ ಪ್ರದೇಶವನ್ನು ದೊಡ್ಡತ್ತೂರಿನ ವ್ಯಾಪ್ತಿಗೆ ಸೇರಿದ ಸರ್ವೆ ನಂ.1/1 ನಲ್ಲಿ 93 ಸೆಂಟ್ ಮತ್ತು ಚಿಕ್ಕತ್ತೂರು ವ್ಯಾಪ್ತಿಗೆ ಸೇರಿದ ಸರ್ವೆ ನಂ.11/1 ರಲ್ಲಿ 2.40 ಏಕರೆ ಪ್ರದೇಶವನ್ನು ನಿವೇಶನ ರಹಿತ ಫಲಾನುಭವಿಗಳಿಗೆ ತಲಾ 3.25 ಸೆಂಟ್‍ನಂತೆ ವಿತರಿಸಲಾಗುವದು.

ಅದರಲ್ಲಿ ಪ.ಜಾ., ಪ.ಪಂ. ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ನಿವೇಶನ ರಹಿತರು ಇದ್ದಾರೆ. ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು ನಿವೇಶನಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ತಾ.ಪಂ. ಕಾರ್ಯನಿರ್ವಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್ ಮಂಜುಳಾ ಮಾತನಾಡಿ, ಈ ಪ್ರದೇಶದ ನಿವೇಶನ ರಹಿತರಾಗಿರುವ 45 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಕೊಡುವಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚು ಆಸಕ್ತರಾಗಿದ್ದಾರೆ. ಅವರ ಆಸಕ್ತಿಯ ಫಲ ಮತ್ತು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರ ಇಚ್ಛಾಶಕ್ತಿಯ ಹಿನ್ನೆಲೆ ಆದಷ್ಟು ಶೀಘ್ರದಲ್ಲಿ ಫಲಾನುಭವಿಗಳ ಪೂರ್ಣ ಮಾಹಿತಿಗಳನ್ನು ಪಡೆಯುವ ಕಾರ್ಯ ಮುಗಿದ ಮೇಲೆ ಅವರಿಗೆ ಶೀಘ್ರದಲ್ಲೇ ಹಕ್ಕು ಪತ್ರ ವಿತರಿಸಲಾಗುವದು ಎಂದರು.

ತಾ.ಪಂ. ಸದಸ್ಯ ಗಣೇಶ್ ಮಾತನಾಡಿ, 2001ರಲ್ಲಿ ನವಗ್ರಾಮ ಯೋಜನೆಯ ಅಡಿಯಲ್ಲಿ ಈ ಪ್ರದೇಶ ಊರುಗುಪ್ಪೆಯಾಗಿತ್ತು. ನಂತರ ಈ ಜಾಗದ ಖಾತೆ ಬದಲಾವಣೆ ಪ್ರಕ್ರಿಯೆಗಾಗಿ ಕಂದಾಯ ಅಧಾಲತ್‍ನಲ್ಲಿ ಇಟ್ಟು ಈ ಪ್ರದೇಶದ ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ಕೊಡುವ ತೀರ್ಮಾನವಾಗಿತ್ತು. ಕೆಲವು ಕಾನೂನು ಅಡಚಣೆಗಳ ಹಿನ್ನೆಲೆ ಆ ಪ್ರಕ್ರಿಯೆ ನಿಧಾನವಾಗಿತ್ತು.

ಈಗ ಅಧಿಕಾರಿಗಳ, ಶಾಸಕರ ಆಸಕ್ತಿ ಈ ಪ್ರದೇಶದ ನಿವೇಶನ ರಹಿತರ ಬದುಕಿನಲ್ಲಿ ನೆಮ್ಮದಿ ಕಾಣುವ ದಿನಗಳು ಹತ್ತಿರವಾಗಿವೆ ಎಂದರು.

ಈ ಸಂದರ್ಭ ಕೂಡು ಮಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಸಣ್ಣಪ್ಪ, ಗ್ರಾ.ಪಂ. ಸದಸ್ಯರಾದ ಆರ್.ಜೆ. ಮಂಜುನಾಥ್, ಸುರೇಶ್, ಅಶ್ವಿನಿಕುಮಾರ್, ಕೂಡುಮಂಗಳೂರು ಬೂತ್ ಸಮಿತಿಯ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ, ಚಿಕ್ಕತ್ತೂರು ಗ್ರಾಮಸ್ಥ ಪ್ರಭಾಕರ್ ಇದ್ದರು.