ಸೋಮವಾರಪೇಟೆ, ಜು. 23: ಸಮೀಪದ ಕೂತಿ ಗ್ರಾಮದ ನಿವಾಸಿ ಕೆ.ಎ. ರತನ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದು, ಪ್ರಸ್ತುತ ರಾಜ್ಯದ ಬಲಿಷ್ಠ ತಂಡಗಳಲ್ಲಿ ಒಂದಾದ ಸೆಂಟ್ರಲ್ ಎಕ್ಸೈಜ್‍ನ ಅತಿಥಿ ಆಟಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಸೋಮವಾರಪೇಟೆ ಜ್ಞಾನವಿಕಾಸ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಓದುತ್ತಿರುವಾಗಲೆ ಶಾಲಾ ಕಬಡ್ಡಿ ತಂಡದಲ್ಲಿ ನಾಯಕನಾಗಿದ್ದು, ನಂತರ ಯಡೂರು ಬಿಟಿಸಿಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಕಬಡ್ಡಿ ತಂತ್ರಗಾರಿಕೆ ಯನ್ನು ಮೈಗೂಡಿಸಿಕೊಂಡರು.

ನಂತರ ಕ್ರೀಡಾ ಕೋಟಾದಲ್ಲಿ ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ಅವಕಾಶ ಪಡೆದ ರತನ್, ಅಲ್ಲಿನ ಕಬಡ್ಡಿ ಕೋಚ್ ಕೃಷ್ಣನಂದ ಅವರ ಗರಡಿಯಲ್ಲಿ ಪಳಗಿದ್ದಾರೆ. 2015 ರಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಕುಮುಟದಲ್ಲಿ ನಡೆದ ರಾಜ್ಯ ಜೂನಿಯರ್ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆಯುವದರೊಂದಿಗೆ, ಬೆಸ್ಟ್ ರೈಡರ್ ಪ್ರಶಸ್ತಿಗೂ ಭಾಜನರಾಗಿದ್ದರು.

2016ರಲ್ಲಿ ಒಕ್ಕಲಿಗ ಯುವ ವೇದಿಕೆ ಆಶ್ರಯದಲ್ಲಿ ಸೋಮವಾರ ಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರಿನ ಎಚ್‍ಎಎಲ್ ತಂಡವನ್ನು ಪ್ರತಿನಿಧಿಸಿ ತನ್ನೂರಿನಲ್ಲಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು. 2017ರಲ್ಲಿ ಚೆನೈನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ಜೂನ್ 3 ರಿಂದ 7 ರವರೆಗೆ ತಮಿಳುನಾಡು ಕೊಡಕೂರಿನಲ್ಲಿ ನಡೆದ ಅಖಿಲ ಭಾರತ ದಕ್ಷಿಣವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸೆಂಟ್ರಲ್ ಎಕ್ಸೈಜ್ ತಂಡವನ್ನು ರತನ್ ಪ್ರತಿನಿಧಿಸಿದ್ದರು. ಫೈನಲ್‍ನಲ್ಲಿ ವಿಜಯಬ್ಯಾಂಕ್ ತಂಡಕ್ಕೆ ತೀವ್ರ ಪೈಪೋಟಿ ನೀಡಿದ ತಂಡ ದ್ವಿತೀಯ ಸ್ಥಾನ ಗಳಿಸಿತು.

ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಕಳೆದ ಜು. 6 ರಿಂದ 9 ರವರೆಗೆ ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸೆಂಟ್ರಲ್ ಎಕ್ಸೈಜ್ ತಂಡ ರನ್ನರ್ ಅಫ್ ಆಯಿತು. ರತನ್ ಬೆಸ್ಟ್ ರೈಡರ್ ಪ್ರಶಸ್ತಿ ಪಡೆದಿದ್ದಾರೆ.

ತಾಲೂಕಿನ ಕೂತಿ ಗ್ರಾಮದ ಯು.ಎಂ. ಅಪ್ಪಚ್ಚು, ಇಂದಿರಾ ದಂಪತಿಯ ಪುತ್ರರಾಗಿರುವ ರತನ್, ಪ್ರಸಕ್ತ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ.

ಕಬಡ್ಡಿ ಗ್ರಾಮೀಣ ಜನರಿಗೆ ಅತ್ಯಂತ ಪ್ರಿಯವಾದ ಕ್ರೀಡೆ. ಪ್ರೊ. ಕಬಡ್ಡಿಯಲ್ಲಿ ಸ್ಥಾನ ಗಿಟ್ಟಿಸಿ, ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಬಯಕೆ ಇದೆ. ಪ್ರೋತ್ಸಾಹ ಸಿಕ್ಕಿದರೆ ಎಲ್ಲವನ್ನು ಸಾಧಿಸಬಹುದು ಎಂದು ಕೆ.ಎ. ರತನ್ ಅಭಿಪ್ರಾಯಿಸಿದ್ದಾರೆ.