ಗೋಣಿಕೊಪ್ಪಲು, ಜು. 23: ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಪರವಾಗಿ ಉತ್ತಮ ಕೆಲಸ ಮಾಡುವ ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಮುಖ ಪಾತ್ರ ವಹಿಸುವಂತಾಗಬೇಕೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಕರೆ ನೀಡಿದರು.ಗೋಣಿಕೊಪ್ಪ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಪಕ್ಷ ಜಾತ್ಯತೀತ ನೆಲೆಯುಳ್ಳ ಪಕ್ಷವಾಗಿದ್ದು ಅಲ್ಪಸಂಖ್ಯಾತ ಹಾಗೂ ದಲಿತರ ಶ್ರೇಯೋಭಿವೃದ್ಧಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿಯ ಗೆಲುವಿಗೆ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು ಶ್ರಮವಹಿಸಿ ರಾಜ್ಯಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಿಳಿಸಿ ಪ್ರಚಾರ ಮಾಡಬೇಕು ಎಂದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಮಾತನಾಡಿ, ಪಕ್ಷದ ಸಂಘಟನೆಗೆ ಅಲ್ಪಸಂಖ್ಯಾತ ಘಟಕ ಪೂರಕ ಬೆಂಬಲ ನೀಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಸದಸ್ಯ ಶಮೀರ್ ಮಾತನಾಡಿ, ಅಲ್ಪ ಸಂಖ್ಯಾತರು ಆಮಿಷಗಳಿಗೆ ಬಲಿಯಾಗಿ ಮತಗಳು ಛಿದ್ರವಾಗುತ್ತಿದೆ ಇದರ ಲಾಭವನ್ನು ಬಿಜೆಪಿ ಪಡೆದು ಕೊಳ್ಳುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಬಿಜೆಪಿ ನಮ್ಮ ಪರ ಎಂದು ಸುಳ್ಳು ಹೇಳುತ್ತಿದೆÉ ಎಂದರು.
ಹೈಕಮಾಂಡ್ ಸೂಚಿಸಿದ ಅಭ್ಯರ್ಥಿ ಗೆಲುವಿಗೆ ಕಟಿಬದ್ದವಾಗಿ ಕೆಲಸ ಮಾಡಬೇಕು. ಭಿನ್ನಾಭಿ ಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎನ್ ಪ್ರಕಾಶ್ ಹೇಳಿದರು.
ಕೆಲಕಾಲ ವಾಗ್ವಾದ
ಗೋಣಿಕೊಪ್ಪ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಲೀಮುಲ್ಲಾ ಪಕ್ಷ ಸಂಘಟಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಲವು ಕಾರ್ಯಕರ್ತರು ಸಭೆಯಲ್ಲಿ ಖಂಡಿಸಿದರು.
ಬ್ಲಾಕ್ ಅಧ್ಯಕ್ಷ ತೀತಿರ ಧರ್ಮಜ ಈ ಬಗ್ಗೆ ಮಾತನಾಡಿ, ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು. ಈ ಬಗ್ಗೆ ಲಿಖಿತ ದೂರು ಸಲ್ಲಿಸಿ ಎಂದರು.
ಕಳೆದ 3 ವರ್ಷಗಳಿಂದ ಯಾವದೇ ಸಭೆ ಕರೆಯದಿರುವದು ತಪ್ಪು ಈ ಬಗ್ಗೆ ವಿಚಾರಣೆ ಮಾಡಲಾಗುವದು ಎಂದು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಹೇಳಿದರು. ನಂತರ ಪಕ್ಷದ ಪ್ರಮುಖರು ಕಾರ್ಯಕರ್ತರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಕೆ ಪೋಕುಟ್ಟಿ, ಗ್ರಾ.ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಅಬ್ದುಲ್ ಸಮ್ಮದ್ ಹಾಜರಿದ್ದರು.