*ಗೋಣಿಕೊಪ್ಪಲ, ಜು. 24: ಕಾಡಾನೆ ಹಾವಳಿಯಿಂದ ತಿತಿಮತಿ, ನೋಕ್ಯ, ಎಡತೊರೆ ಗ್ರಾಮದ ರೈತರು, ಬೆಳೆಗಾರರು ಊರು ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.ಕಳೆದ ಕೆಲತಿಂಗಳುಗಳಿಂದ ನಿರಂತರವಾಗಿ ಆನೆಗಳ ಉಪಟಳದಿಂದ ಬೆಳೆ ನಷ್ಟ ಉಂಟಾಗುತ್ತಿದೆ. ಆನೆ ದಾಳಿಯಿಂದ ಕಾಫಿ, ಬಾಳೆ, ತೆಂಗು, ಅಡಿಕೆ ಗಿಡಗಳು ನಾಶವಾಗಿ ಭಾರೀ ನಷ್ಟ ಸಂಭವಿಸಿದೆ. ಬೆಳೆದ ಫಸಲು ಕೈಗೆ ಬರುತ್ತಿಲ್ಲ. ಈ ಭಾಗದಲ್ಲಿ ಕೃಷಿ ಮಾಡುವದಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಹೀಗಾಗಿ ಬೇಸತ್ತ ಬೆಳೆಗಾರರು ಆನೆ ಉಪಟಳದಿಂದ ಊರು ಬಿಡುವದೆ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕಾಫಿ ಬೆಳೆಗಾರ ಚೆಪ್ಪುಡಿರ ಕಾರ್ಯಪ್ಪ ತಿಳಿಸಿದ್ದಾರೆ.

ತಿತಿಮತಿ ಕೃಷ್ಣ ಬಲರಾಮ ದೇವಸ್ಥಾನ ಬಳಿಯ ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿದೆ. 15 ರಿಂದ 20 ಆನೆಗಳು ನಿತ್ಯ ತೋಟದಲ್ಲಿ ಕಾಣ ಸಿಗುತ್ತಿದೆ. ಈ ಸ್ಥಳದಲ್ಲೆ ಸರಕಾರಿ ಪ್ರಾಥಮಿಕ ಶಾಲೆ ಇದೆ. ಆನೆಯ ಉಪಟಳದಿಂದ ಶಾಲೆಗೆ ಮಕ್ಕಳು ಬರಲು ಸಹ ಭಯ ಪಡುತ್ತಿದ್ದಾರೆ. ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲಾ ಪರಿಣಾಮವನ್ನು ಮನಗಂಡ ಬೆಳೆಗಾರರು ಊರು ಬಿಡುವದೇ ಲೇಸು ಎಂಬ ತೀರ್ಮಾನಕ್ಕೆ ಬಂದಿರುವದಾಗಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಆನೆ ಹಾವಳಿಗೆ ಕಾರಣವಾಗುತ್ತಿದೆ. ಸ್ಥಳೀಯ ಅಧಿಕಾರಿಗಳಿಂದ ಜಿಲ್ಲೆ, ರಾಜ್ಯ ಮಟ್ಟದ ಅಧಿಕಾರಿಗಳಿಗೂ ಇಲ್ಲಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಪರಿಹಾರಕ್ಕೆ ಮುಂದಾಗಿಲ್ಲ. ಇತ್ತೀಚೆಗಷ್ಟೆ ಆನೆ ನಿಯಂತ್ರಣ ವಿಶೇಷ ತಂಡವನ್ನು ಇಲಾಖೆ ಅನುಷ್ಟಾನಕ್ಕೆ ತಂದರೂ ಯಾವದೇ ಪ್ರಯೋಜನ ಕಂಡುಬಂದಿಲ್ಲ. ಕೇವಲ ಪ್ರಚಾರಕಷ್ಟೇ ಅಧಿಕಾರಿಗಳು ಈ ರೀತಿ ಯೋಜನೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.

-ಎನ್.ಎನ್.ದಿನೇಶ್