ಮಡಿಕೇರಿ, ಜು. 23: ದುಡಿಯುವ ವರ್ಗದ ಕಾರ್ಮಿಕರು ಸಂಘಟಿತರಾಗುವ ಮೂಲಕ, ಸರಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಹೆಚ್. ರಾಮಕೃಷ್ಣ ಕರೆ ನೀಡಿದ್ದಾರೆ. ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಭಾರತೀಯ ಮಜ್ದೂರ್ ಸಂಘದ 62ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗಿನಲ್ಲಿ ದುಡಿಯುತ್ತಿರುವ ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಟೋ ಹಾಗೂ ವಾಹನ ಚಾಲಕರ ಸಹಿತ ವಿವಿಧ ಉದ್ಯಮಗಳ ಕಾರ್ಮಿಕರಿಗೆ ಅನೇಕ ರೀತಿ ಸೌಲಭ್ಯಗಳಿದ್ದು, ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೂ ನೆರವು ಕಲ್ಪಿಸಲಾಗುವದು ಎಂದು ಅಧಿಕಾರಿ ಮಾಹಿತಿ ನೀಡಿದರು.

ಭಾರತೀಯ ಮಜ್ದೂರ್ ಸಂಘದ ವಿಭಾಗ ಪ್ರಮುಖರಾದ ಯೋಗೇಂದ್ರ, ಕಾರ್ಯಕ್ರಮದ ಉದ್ದೇಶ ಮತ್ತು ಭಾರತೀಯ ಮಜ್ದೂರ್ ಸಂಘ ಬೆಳೆದು ಬಂದ ಕುರಿತು ಮಾತನಾಡಿದರು. ತನ್ನ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಕಂಡುಕೊಂಡಿರುವ ಚೀನಾ ದೇಶ ಗಡಿಯಲ್ಲಿ ಆಕ್ರಮಣನಿರತವಾಗಿದ್ದು, ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಅವರು ಕರೆ ನೀಡಿದರು.

ಕಾರ್ಮಿಕರು ಯಾವದೇ ರಾಜಕೀಯ ಪಕ್ಷಗಳ ಕೈಗೊಂಬೆ ಗಳಾಗದೆ, ಸ್ವಾಭಿಮಾನದ ದುಡಿಮೆ ಯೊಂದಿಗೆ ಭಾರತೀಯ ಮಜ್ದೂರ್ ಸಂಘದೊಂದಿಗೆ ದೇಶಕಟ್ಟುವ ಕಾರ್ಯದಲ್ಲಿ ಜೋಡಿಸಿಕೊಳ್ಳುವಂತೆ ಯೋಗೇಂದ್ರ ಕಿವಿಮಾತು ಹೇಳಿದರು. ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಸಂಘಟಿತ ರಾಗುವ ಮೂಲಕ ಬಿ.ಎಂ.ಎನ್. ಬಲಿಷ್ಠಗೊಳಿಸಲು ಕೈಜೋಡಿಸುವಂತೆ ಸಲಹೆ ನೀಡಿದರು.

ಈ ಸಂದರ್ಭ ಕಾರ್ಮಿಕ ಇಲಾಖೆಯಿಂದ ವಿವಿಧ ಕಾರ್ಮಿಕರಿಗೆ ಗುರುತಿನ ಚೀಟಿ, ವಿಮಾ ಯೋಜನೆ ಪತ್ರ ನೀಡಲಾಯಿತು. ಇದೇ ಸಂದರ್ಭ ನಗರದೆಲ್ಲೆಡೆ ಆಟೋ ಚಾಲಕರ ಸಹಿತ ಮಜ್ದೂರ್ ಸಂಘದ ಕಾರ್ಯಕರ್ತರು ಜಾಥಾ ನಡೆಸಿದರು. ಆಟೋ ಚಾಲಕರ ಸಂಘದ ಡಿ.ಎಚ್. ಮೇದಪ್ಪ, ಸಂಘ ಪರಿವಾರದ ಧನಂಜಯ್, ಪವನ್, ಕುಮಾರ್, ನಂದೀಶ್, ಗಣೇಶ್, ಯೋಗನಾಂದ ಸಹಿತ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಬಿಎಂಎಸ್ ತಾಲೂಕು ಅಧ್ಯಕ್ಷ ಪಿ. ಸುಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.