ಗೋಣಿಕೊಪ್ಪಲು, ಜು. 23: ಮಳೆಗಾಲದಲ್ಲಿ ಆಹಾರವಿಲ್ಲದೆ ವಲಸೆ ಹೋಗುವ ಜೇನು ಹುಳಗಳ ರಕ್ಷಣೆಗೆ ಪೂರಕವಾಗುವಂತೆ, ಮಳೆಗಾಲದಲ್ಲಿ ಹೂ ಬಿಡುವ ಮರದ ಗಿಡಗಳನ್ನು ನೆಡುವ ಮೂಲಕ ಆರ್ಟ್ ಆಫ್ ಲಿವಿಂಗ್ ವತಿಯಿಂದ ಹಮ್ಮಿಕೊಂಡಿ ರುವ ಲಕ್ಷ್ಮಣತೀರ್ಥ ನದಿ ಪುನಶ್ಚೇತನ ಯೋಜನೆಯ ಎರಡನೇ ಹಂತದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿಟ್ಟೂರು ಹಾಗೂ ಜಾಗಲೆ ಗ್ರಾಮದ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ಸುಮಾರು 100 ಜನರು 700 ಗಿಡಗಳನ್ನು ನೆಟ್ಟರು. 5 ಏಕ್ರೆ ಜಾಗದಲ್ಲಿ ಸಾಲುದೂಪ, ಹೊಂಗೆ, ಅಂಟವಾಳ ಹಾಗೂ ಸುರಹೊನ್ನೆ ಗಿಡಗಳನ್ನು ನೆಡಲಾಯಿತು. ನಿವೃತ ಕರ್ನಲ್ ಪಟ್ಟಡ ಕರುಂಬಯ್ಯ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡಾ. ಕೆಂಚರೆಡ್ಡಿ, ಮಳೆಗಾಲದಲ್ಲಿ ಜೇನುಹುಳಗಳು ಆಹಾರಕ್ಕಾಗಿ ಪರದಾಡುತ್ತವೆ. ಕೊಡಗಿನಲ್ಲಿ ಯಾವ ಗಿಡಗಳು ಹೂಬಿಡದ ಕಾರಣ ಆಹಾರ ಸಿಗದೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಹೂ ಬಿಡುವ ಮರಗಳ ಪೋಷಣೆ ಅಗತ್ಯವಾಗಿದೆ. ಈ ದೃಷ್ಟಿಯಿಂದ ಅರಣ್ಯ ಕಾಲೇಜು ನರ್ಸರಿಯಲ್ಲಿ ಬೆಳೆಸಿರುವ ಗಿಡಗಳನ್ನು ನೆಡಲಾಗುತ್ತಿದೆ ಎಂದರು.
ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಮಿತಿ ಸಂಘಟಕ ಅಳಮೇಂಗಡ ಡಾನ್ ರಾಜಪ್ಪ ಮಾತನಾಡಿ, ಸುಮಾರು 3 ಲಕ್ಷ ಗಿಡಗಳನ್ನು ನೆಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಹಂತ ಹಂತವಾಗಿ ಯೋಜನೆ ಕಾರ್ಯಗತ ಮಾಡಲಾಗುತ್ತಿದೆ. ಇದರಂತೆ ಎರಡನೇ ಹಂತದ ಕಾರ್ಯಕ್ರಮದಲ್ಲಿ ಜೇನು ಹುಳಗಳಿಗೆ ಆಹಾರವಾಗುವಂತಹ ಮರಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಆರ್ಟ್ ಆಫ್ ಲಿವಿಂಗ್‍ನ ಸದಸ್ಯರುಗಳು, ನಿಟ್ಟೂರು, ಪೊನ್ನಪ್ಪಸಂತೆ, ಅಮ್ಮತ್ತಿ, ಕಾನೂರು ಭಾಗದ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಈ ಸಂದರ್ಭ ಅರಣ್ಯ ಮಹಾ ವಿದ್ಯಾಲಯ ಸಿಲ್ವಿಕಲ್ಚರ್ ವಿಭಾಗ ಮುಖ್ಯಸ್ತ ಡಾ. ರಾಮಕೃಷ್ಣ ಹೆಗಡೆ, ನಿಟ್ಟೂರು ಗ್ರಾ ಪಂ ಉಪಾಧ್ಯಕ್ಷ ಪವನ್ ಚಿಟ್ಯಪ್ಪ, ಆರ್ಟ್ ಆಫ್ ಲಿವಿಂಗ್‍ನ ಲಕ್ಷ್ಮಿ ರಾಜಪ್ಪ ಪಾಲ್ಗೊಂಡಿದ್ದರು.