ಸೋಮವಾರಪೇಟೆ,ಜು.24: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣ ಗೊಳ್ಳುತ್ತಿದ್ದರೂ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವು ಸಮಯಗಳ ಹಿಂದೆಯೇ ಈ ಬಗ್ಗೆ ಆಡಳಿತ ಮಂಡಳಿಯ ಗಮನ ಸೆಳೆದಿದ್ದರೂ ಯಾವದೇ ಸ್ಪಂದನೆ ದೊರಕದ ಹಿನ್ನೆಲೆ ಇಂದು ಕಚೇರಿ ಎದುರು ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಪಂಚಾಯಿತಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರುಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪದಾಧಿಕಾರಿಗಳು, ಮುಖ್ಯಾಧಿಕಾರಿ ನಾಚಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು, ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರು ಸ್ಥಳಕ್ಕಾಗಮಿಸ ಬೇಕೆಂದು ಪಟ್ಟುಹಿಡಿದರು.

ಪೂರ್ವಾಹ್ನ 10.30ಕ್ಕೆ ಪ್ರತಿಭಟನೆ ಆರಂಭವಾಗಿದ್ದರೂ ಸಹ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಭಾಗಿಯಾಗಿದ್ದ ಅಧ್ಯಕ್ಷರು ಮಧ್ಯಾಹ್ನ 1.20ಕ್ಕೆ ಕಚೇರಿಗೆ ಆಗಮಿಸಿದರು. ಈ ಸಂದರ್ಭ ಆಕ್ರೋಶಿತರಾದ ಪ್ರತಿಭಟನಾಕಾರರು ಕಚೇರಿ ಬಾಗಿಲಿಗೆ ಅಡ್ಡನಿಂತು ಪ.ಪಂ. ವಿರುದ್ಧ ಆರೋಪಗಳ ಸುರಿಮಳೆಗೈದರು.

ಕಳೆದ ಐದಾರು ತಿಂಗಳುಗಳಿಂದ ಪಟ್ಟಣದ ಮನೆಗಳು, ಅಂಗಡಿ, ಹೊಟೇಲ್‍ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಜನರ ಹಿತವನ್ನು ಕಡೆಗಣಿಸಿದ್ದಾರೆ ಎಂದು ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಅಧ್ಯಕ್ಷೆ ವಿಜಯಲಕ್ಷ್ಮೀ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದಲಿಂಗಪುರದಲ್ಲಿ ಪ.ಪಂ.ನಿಂದ ಜಾಗ ಖರೀದಿಸಿ ಲಕ್ಷಾಂತರ ರೂಪಾಯಿ ವ್ಯಯಿಸಿ ಆವರಣಗೋಡೆ ನಿರ್ಮಿಸಿದ್ದರೂ ಅಲ್ಲಿಗೆ ಕಸ ತೆಗೆದುಕೊಂಡು ಹೋಗುತ್ತಿಲ್ಲ. ಕರ್ಕಳ್ಳಿಯಲ್ಲಿ ಜಾಗ ನೀಡಲು ವ್ಯಕ್ತಿ ಮುಂದೆ ಬಂದಿದ್ದರೂ ಆಡಳಿತ ಮಂಡಳಿ ತ್ಯಾಜ್ಯ

(ಮೊದಲ ಪುಟದಿಂದ) ವಿಲೇವಾರಿಗೆ ಮನಸ್ಸು ಮಾಡುತ್ತಿಲ್ಲ ಎಂದು ಕರವೇ ನಗರಾಧ್ಯಕ್ಷ ಮಂಜುನಾಥ್ ಆರೋಪಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಅಧ್ಯಕ್ಷೆ ವಿಜಯಲಕ್ಷ್ಮೀ, ಸಿದ್ದಲಿಂಗಪುರ ಮತ್ತು ಕರ್ಕಳ್ಳಿಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಟ್ರ್ಯಾಕ್ಟರ್‍ಗೆ ತಡೆಯೊಡ್ಡಿದ ಹಿನ್ನೆಲೆ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ. ಇದೀಗ 30 ಲಕ್ಷ ವೆಚ್ಚದಲ್ಲಿ ನೂತನ ಘಟಕ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿದ್ದು, ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಭರವಸೆ ನೀಡಿದರು.

ಪಟ್ಟಣದ ಆಟೋ ನಿಲ್ದಾಣ ಸಮೀಪ ಹೈಮಾಸ್ಟ್ ದೀಪ ಅಳವಡಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಬೀದಿಯಲ್ಲಿನ ಹುಚ್ಚುನಾಯಿ ಹಾವಳಿಗೆ ಕಡಿವಾಣ ಹಾಕಬೇಕು. ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಜೇಸೀ ವೇದಿಕೆ ಮುಂಭಾಗ ಸ್ಥಗಿತಗೊಂಡಿರುವ ಸಭಾಂಗಣ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಅಧ್ಯಕ್ಷರಿಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ನಗರದ ಪುಟ್ಟಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಧ್ಯಕ್ಷರು ಸ್ಥಳಕ್ಕೆ ಆಗಮಿಸಲು ತಡವಾದ ಹಿನ್ನೆಲೆ ಕಚೇರಿಯ ಮುಂಭಾಗವೇ ಅಡುಗೆ ತಯಾರಿಸಲಾಯಿತು.

ಪ್ರತಿಭಟನೆಯಲ್ಲಿ ಕರವೇ ಕಾನೂನು ಸಲಹೆಗಾರ ಕಾಟ್ನಮನೆ ವಿಠಲ್, ತಾಲೂಕು ಉಪಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ನಗರ ಕಾರ್ಯದರ್ಶಿ ಕೆ.ಪಿ. ರವೀಶ್, ಉಪಾಧ್ಯಕ್ಷ ಪಿ.ಎ. ಅಬ್ಬಾಸ್, ಹೆಚ್.ಡಿ. ಸಂತೋಷ್, ಸಹ ಕಾರ್ಯದರ್ಶಿ ಬೇಟು, ಸಂಘಟನಾ ಕಾರ್ಯದರ್ಶಿ ರುಬೀನಾ, ನಾಗೇಶ್ ವಿ.ಎನ್., ದೇವೇಂದ್ರ, ನೇತ್ರಾ, ವನಿತಾ, ಇಬ್ರಾಹಿಂ ಸೇರಿದಂತೆ ಇತರರು ಭಾಗವಹಿಸಿದ್ದರು.