ಮಡಿಕೇರಿ, ಜು.24 : ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನಂತೆ ದಸರಾ ಬೈಲಾ ತಿದ್ದುಪಡಿ ಸಭೆ ಕೇವಲ ಆರೋಪ ಪ್ರತ್ಯಾರೋಪದಿಂದ ಮೊಟಕುಗೊಂಡಿರುವದು ವಿಷಾದನೀಯವೆಂದು ತಿಳಿಸಿರುವ ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದಸರಾ ಸಮಿತಿಯ ಮಾಜಿ ಉಪಾಧ್ಯಕ್ಷ ಪಿ.ಎಂ.ರವಿ, ನಾಡಹಬ್ಬ ದಸರಾದಲ್ಲೂ ರಾಜಕೀಯ ಬೆರೆಯುತ್ತಿರುವದು ಒಳ್ಳೆಯ ಬೆಳವಣಿಗೆಯಲ್ಲವೆಂದು ಹೇಳಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಪಿ.ಎಂ.ರವಿ, ನಾಡಹಬ್ಬ ದಸರಾ ಎಲ್ಲರೂ ಒಗ್ಗೂಡಿ ಆಚರಿಸಬೇಕಾದ ಹಬ್ಬವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ವಾದ, ಪ್ರತಿವಾದ, ವಿವಾದಗಳನ್ನು ಸೃಷ್ಟಿಸುತ್ತಿರುವದು ಬೇಸರದ ವಿಚಾರವಾಗಿದೆ.

ದಸರಾ ಸಭೆಯಲ್ಲಿ ಗುಂಪುಗಾರಿಕೆ ಮತ್ತು ರಾಜಕೀಯ ಪ್ರವೇಶವಾಗಿರುವದು ಸ್ಪಷ್ಟವಾಗುತ್ತಿದೆ. ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ ಗಲಾಟೆಯಿಂದ ಮಡಿಕೇರಿ ಜನತೆ ತಲೆ ತಗ್ಗಿಸುವಂತ್ತಾಗಿದ್ದು, ಇದೀಗ ದಸರಾ ಸಭೆಯಲ್ಲೂ ಇದೇ ಬೆಳವಣಿಗೆ ಕಂಡು ಬರುತ್ತಿರುವದು ಅಪಮಾನಕಾರಿ ಎಂದು ಪಿ.ಎಂ.ರವಿ ಟೀಕಿಸಿದ್ದಾರೆ.

ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮನೋಸ್ಥಿತಿಗಳು ಕಾರ್ಯಪ್ರವೃತ್ತವಾಗಬೇಕೆ ಹೊರತು ಸ್ವಪ್ರತಿಷ್ಠೆಗಾಗಿ ದಸರಾವನ್ನು ಬಳಸಿಕೊಳ್ಳುವುದು ಸರಿಯಲ್ಲ. ಕೇವಲ ಸ್ಥಾನಮಾನಕ್ಕಾಗಿ ದಸರಾ ಸಭೆಯಲ್ಲೂ ಹೋರಾಟ ಮನೋಭಾವ ಪ್ರದರ್ಶನ ಯಾರಿಗೂ ಶೋಭೆ ತರುವುದಿಲ್ಲ. ನಾಡಿಗೇ ಮಾದರಿಯಾಗಿರುವ ಮಡಿಕೇರಿ ದಸರಾ ಆಚರಣೆಯನ್ನು ಅರ್ಥಪೂರ್ಣಗೊಳಿಸಲು ಆರೋಗ್ಯಕರ ಚರ್ಚೆಯ ಅಗತ್ಯವಿದೆಯೇ ಹೊರತು ಹಾದಿ ತಪ್ಪುವ ಬೆಳವಣಿಗೆಗಳನ್ನು ಜನ ಒಪ್ಪುವದಿಲ್ಲ.

ಬೈಲಾ ತಿದ್ದುಪಡಿ ವಿಚಾರ ದಸರಾ ಸಮಿತಿ ಮಾತ್ರವಲ್ಲದೆ ಸಮಿತಿಯ ಪೋಷಕರು, ಮಹಾಪೋಷಕರ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರು. ಜಿಲ್ಲೆಯ ಶಾಸಕರು. ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಬೈಲಾ ತಿದ್ದುಪಡಿ ಸಭೆ ನಡೆಸುವದು ಸೂಕ್ತವೆಂದು ಪಿ.ಎಂ.ರವಿ ಸಲಹೆ ನೀಡಿದ್ದಾರೆ. ದಸರಾ ಸಮಿತಿಯ ಮುಂದಿನ ಸಭೆಯನ್ನು ಅರ್ಥಪೂರ್ಣಗೊಳಿಸಲು ಸರ್ವರು ಸಹನೆಯಿಂದ ಸಹಕರಿಸುವ ಅಗತ್ಯವಿದೆ ಎಂದು ರವಿ ತಿಳಿಸಿದ್ದಾರೆ.