ಶ್ರೀಮಂಗಲ, ಜು. 24: ದಕ್ಷಿಣ ಕೊಡಗಿನ ಜನರಿಗೆ ಹೆಚ್ಚು ಅನುಕೂಲ ವಾಗುವ ನೂತನ ಪೊನ್ನಂಪೇಟೆ ತಾಲೂಕು ರಚನೆಗೆ ತಾನು ಹಾಗೂ ಅರುಣ್ ಮಾಚಯ್ಯ ಸರಕಾರದ ಮಟ್ಟದಲ್ಲಿ ಗಂಭೀರವಾಗಿ ಪ್ರಯತ್ನಿಸುತ್ತಿದ್ದು, ಈ ಹಿನ್ನಲೆಯಲ್ಲಿ ದಿಡ್ಡಳ್ಳಿಗೆ ಆಗಮಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಪೊನ್ನಂಪೇಟೆಗೆ ಕರೆತಂದು ವಸ್ತುಸ್ಥಿತಿ ಯನ್ನು ಮನವರಿಕೆ ಮಾಡಲಾಗಿದೆ. ಆದರೆ ವೀರಾಜಪೇಟೆ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಇಷ್ಟವಿಲ್ಲದ ಕಾರಣಕ್ಕಾಗಿ ಅಡಚಣೆ ಸೃಷ್ಟಿಸುತ್ತಿದ್ದಾರೆ ಎಂದು ರಾಜ್ಯ ಅರಣ್ಯ ನಿಗಮ ಮಂಡಳಿಯ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಆರೋಪಿಸಿದ್ದಾರೆ.

ಬಿರುನಾಣಿ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯ ಕರ್ತರು, ಜನಪ್ರತಿನಿಧಿಗಳು ಶ್ರಮಿಸಿ ರೂಪಿಸಿದ ರಸ್ತೆ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು

(ಮೊದಲ ಪುಟದಿಂದ) ಬಿ.ಜೆ.ಪಿ. ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸುವ ಮೂಲಕ ಈ ಅಭಿವೃದ್ದಿ ಕಾರ್ಯಕ್ಕೆ ಶ್ರಮಿಸಿ ದವರನ್ನು ಅವಮಾನಿಸುತ್ತಿ ದ್ದಾರೆ ಎಂದು ಟೀಕಿಸಿದರು.

ವಿಶ್ವದಾದ್ಯಂತ ಕಾಫಿ ಹಾಗೂ ಕರಿಮೆಣಸು ಫಸಲು ಉತ್ಪಾದನೆ ತೀವ್ರವಾಗಿ ಕುಂಠಿತವಾದರೂ, ಗಣನೀಯವಾಗಿ ಏರಿಕೆಯಾU Àಬೇಕಿದ್ದ ಬೆಲೆ ಕುಸಿಯುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಸರಕಾರದ ರೈತ ವಿರೋಧಿ ನೀತಿ ಹಾಗೂ ಅವೈಜ್ಞಾನಿಕ ಆಮದು ರಪ್ತು ನೀತಿ ಪ್ರಮುಖ ಕಾರಣ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯು ಅತಿ ಹೆಚ್ಚು ಮಳೆ ಬೀಳುವ, ಗುಡ್ಡಗಾಡು ಪ್ರದೇಶವಾಗಿರುವದರಿಂದ ಇಲ್ಲಿ ದಿನನಿತ್ಯ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಈ ವ್ಯಾಪ್ತಿಯ ನಾಗರೀಕರಿಗೆ ಅಭಿವೃದ್ದಿ ನಿಗಮದಿಂದ 500 ಸೋಲಾರ್ ದೀಪದ ಸೌಲಭ್ಯವನ್ನು ಮುಂದಿನ 20 ದಿನದೊಳಗೆ ಒದಗಿಸುವ ಭರವಸೆ ನೀಡಿದರು.

ಕೆ.ಪಿ.ಸಿ.ಸಿ. ನೂತನ ಕಾರ್ಯ ದರ್ಶಿ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರ ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ ದೇಶದ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದು, ಸಂಕಷ್ಟ ಎದುರಿಸುತ್ತಿದ್ದ ಕಾಫಿ ಬೆಳೆಗಾರರ 900 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ ಸರಕಾರ ಕೈಗಾರಿಕೋದ್ಯಮದ 33 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಇದೀಗ ಕೇಂದ್ರ ಸರಕಾರ ಕೈಗಾರಿಕೊದ್ಯಮದ 6 ಲಕ್ಷ ಕೋಟಿ ಅನುತ್ಪಾದಿತ ಸಾಲದಲ್ಲಿ 2.6 ಲಕ್ಷ ಕೋಟಿ ಸಾಲ ಮನ್ನಾ ಮಾಡಲು ಚಿಂತಿಸುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕೈಗಾರಿಕೋದ್ಯಮಿ ಗಳ ಬಗ್ಗೆ ಇರುವ ಕಾಳಜಿ, ರೈತರ ಮೇಲೆ ಕಿಂಚಿತ್ತು ಇಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿ ರೈತರಿಗೆ ಪ್ರಯೋಜನ ಮಾಡಿದೆ. ಆದರೆ ಕಳೆದ ಅವಧಿಯಲ್ಲಿ ಬಿ.ಜೆ.ಪಿ.ಯ ಜಗದೀಶ್ ಶೆಟ್ಟರ್ ಸರಕಾರ ರೂ. 25 ಸಾವಿರ ಮನ್ನಾ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಲಿಲ್ಲ. ಈ ಹಣವನ್ನು ಕಾಂಗ್ರೇಸ್ ಸರಕಾರ ಸಂಬಂಧಿಸಿದ ಬ್ಯಾಂಕುಗಳಿಗೆ ಒದಗಿಸಿದೆ ಎಂದು ಹೇಳಿದ ಅರುಣ್ ಮಾಚಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ 2013ರ ಚುನಾವಣೆ ವೇಳೆ ನೀಡಿದ್ದ 200 ಆಶ್ವಾಸನೆಗಳಲ್ಲಿ 182ನ್ನು ಪೂರ್ಣಗೊಳಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ತಮ್ಮ ಸಂಕಲ್ಪ ಪತ್ರದಲ್ಲಿ ನೀಡಿದ ಆಶ್ವಾಸನೆ ಎಷ್ಟು ಈಡೇರಿದೆ ಎಂದು ಹೇಳಿದ ಅವರು, ಪ್ರಧಾನಿ ಮೋದಿ ಅವರು 3 ವರ್ಷಗಳಲ್ಲಿ ಒಂದು ವರ್ಷ ವಿದೇಶ ಪ್ರವಾಸದಲ್ಲಿಯೇ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಬೂತ್ ಮಟ್ಟದಲ್ಲಿ 20 ತಜ್ಞರ ಸಮಿತಿಯನ್ನು ರಚಿಸಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವದು. ಒಂದು ಬೂತ್‍ಗೆ ಒಬ್ಬ ಮುಖಂಡರಿಗೆ ಜವಾಬ್ದಾರಿ ನೀಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆದೇಶ ನೀಡಿದೆ. ಕಾಂಗ್ರೆಸ್ ಪಕ್ಷದಿಂದ ಯಾವದೇ ಅಭ್ಯರ್ಥಿ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುವದು ಪ್ರತಿಯೊಬ್ಬ ಪಕ್ಷದ ಮುಖಂಡ, ಕಾರ್ಯಕರ್ತನ ಕರ್ತವ್ಯವಾಗಿದೆ. ರಾಜ್ಯ ಸರಕಾರದ ಅಭಿವೃದ್ದಿ ಕಾರ್ಯವನ್ನು ಜನರಿಗೆ ಮುಟ್ಟಿಸುವ ಮೂಲಕ ಮತವಾಗಿ ಪರಿವರ್ತಿಸಲು ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಸರ ಚಂಗಪ್ಪ ಮಾತನಾಡಿ ಕಾಂಗ್ರೆಸ್‍ನಿಂದ ಜಿಲ್ಲೆಯಲ್ಲಿ ಚುನಾಯಿತ ಶಾಸಕರು ಇಲ್ಲದಿದ್ದರೂ ಅಭಿವೃದ್ದಿಗೆ ತೊಡಕಾಗಿಲ್ಲ. ಬದಲಿಗೆ ಉಸ್ತುವಾರಿ ಸಚಿವರು ಹಾಗೂ ಎಂ.ಎಲ್ಸಿ ವೀಣಾ ಅಚ್ಚಯ್ಯ ಅವರ ಮೂಲಕ ಸಾಕಷ್ಟು ಅನುದಾನ ಬಿಡುಗಡೆಯಾಗದ್ದು, ಬಿ.ಜೆ.ಪಿ. ಸರಕಾರದ ಅವಧಿ ಗಿಂತಲೂ ಹೆಚ್ಚಿನ ಅಭಿವೃದ್ಧಿ ಹಾಗೂ ಅನುದಾನ ಜಿಲ್ಲೆಗೆ ದೊರೆತಿದೆ ಎಂದು ಹೇಳಿದರು.

ಸಭೆಯ ಅದ್ಯಕ್ಷತೆ ವಹಿಸಿ ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಣ್ಣಳಮಾಡ ಲಾಲಾಅಪ್ಪಣ್ಣ ಮಾತನಾಡಿ, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆ ಯಾವ ಸರಕಾರ ಹಾಗೂ ಜನಪ್ರತಿನಿಧಿಗಳು, ಸಚಿವರು ಮಾಡದಷ್ಟು ಅಭಿವೃದ್ದಿಯನ್ನು ಈ ಬಾರಿಯ ಕಾಂಗ್ರೆಸ್ ಸರಕಾರ ಮಾಡಿದೆ. ಇದರಲ್ಲಿ ಹುದಿಕೇರಿ-ಬಿರುನಾಣಿ ಸಂಪರ್ಕ ರಸ್ತೆ ಸೇತುವೆ ಹಾಗೂ ಪುತ್ತುಭಗವತಿ ದೇವಸ್ಥಾನ ಮೂಲಕ ಸಂಪರ್ಕ ರಸ್ತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ 15 ಕೋಟಿ, ಟಿ.ಶೆಟ್ಟಿಗೇರಿ-ಬಿರುನಾಣಿ ರಸ್ತೆ ಅಗಲೀಕರಣಕ್ಕೆ 5 ಕೋಟಿ ಹೆಚ್ಚುವರಿಯಾಗಿ ಮತ್ತ 3 ಕೋಟಿ, ಶ್ರೀಮಂಗಲ-ಬಿರುನಾಣಿ ವರೆಗೆ ವಿದ್ಯುತ್ ತಡೆರಹಿತ ಮಾರ್ಗ ಸುಮಾರು 1 ಕೋಟಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮಂಜೂ ರಾಗಿರುವದು ಎಂದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್, ಸ್ಥಳೀಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಚೋನಿರ ಶಂಕರ, ಕಾಯಪಂಡ ಸುಬ್ಬಯ್ಯ, ಕಿರುದಂಡ ಸಂಪತ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎ.ಜೆ. ಬಾಬು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ವೀರಾಜಪೇಟೆ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಬಿರುನಾಣಿ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಪರಮೇಶ್ವರ ಮತ್ತಿತರರು ಹಾಜರಿದ್ದರು.