ಗೋಣಿಕೊಪ್ಪಲು, ಜು.24 : ವೀರಾಜಪೇಟೆ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ಒಟ್ಟು 5 ಮನೆಗಳು ಹಾನಿಗೊಳ ಗಾಗಿದ್ದು ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಲಾಗಿದೆ.

ಕಾನೂರು ಗ್ರಾಮದ ವೈ.ಎಸ್.ರಾಮು ಎಂಬವರ ಮನೆ ಕುಸಿದು ರೂ.35ಸಾವಿರ ನಷ್ಟ ಉಂಟಾಗಿದೆ. ಹುದಿಕೇರಿ ಸಮೀಪ ಬೆಳ್ಳೂರುವಿನ ರೂಪಾ ಹೆಚ್.ಆರ್. ಅವರ ಮನೆ ಭಾಗಶಃ ಕುಸಿದು ರೂ.8 ಸಾವಿರ ನಷ್ಟ ಅಂದಾಜಿಸಲಾಗಿದೆ. ಹುದಿಕೇರಿಯಲ್ಲಿ ಮತ್ತೋರ್ವರ ಮನೆ ಕುಸಿತ ಉಂಟಾಗಿ ರೂ.15 ಸಾವಿರ ನಷ್ಟ ಸಂಭವಿಸಿದೆ. ಬಿ.ಶೆಟ್ಟಿಗೇರಿಯ ಸುರೇಶ್‍ಕುಮಾರ್ ಅವರ ಮನೆಕುಸಿತದಿಂದಾಗಿ ರೂ.30 ಸಾವಿರ ನಷ್ಟ ಹಾಗೂ ಬಿರುನಾಣಿಯ ಚೊಟ್ಟಂಗಡ ದೇವಯ್ಯ ಅವರ ಮನೆ ಭಾಗಶಃ ಕುಸಿದು ರೂ.10 ಸಾವಿರ ನಷ್ಟ ಉಂಟಾಗಿರುವದಾಗಿ ವೀರಾಜಪೇಟೆ ತಹಶೀಲ್ಧಾರ್ ಕಚೇರಿ ಮೂಲಗಳು ತಿಳಿಸಿವೆ. ಈಗಾಗಲೇ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಇನ್ನಷ್ಟೇ ಸಂತ್ರಸ್ತರಿಗೆ ಪರಿಹಾರ ದೊರಕಬೇಕಾಗಿದೆ.

ತಾಲೂಕಿನಾದ್ಯಂತ ಮಳೆಯ ವ್ಯತ್ಯಯದಿಂದಾಗಿ ಪ್ರವಾಹ ಸ್ಥಿತಿ ಕಡಿಮೆಯಾಗಿದ್ದು ಗೋಣಿಕೊಪ್ಪಲು ಕೀರೆಹೊಳೆ ದಡದ ನಿವಾಸಿಗಳು, ಕರಡಿಗೋಡು ಕಾವೇರಿ ತಟದ ನಿವಾಸಿಗಳಿಗೆ ಗಂಜಿಕೇಂದ್ರದ ಅಗತ್ಯ ಇಲ್ಲವೆನ್ನಲಾಗಿದೆ. ಈಗಿದ್ದೂ ಮುಂಜಾಗ್ರತಾ ಕ್ರಮವಾಗಿ ಅಪಾಯದ ಅಂಚಿನಲ್ಲಿ ವಾಸವಿರುವ ನಿವಾಸಿಗಳು ಮನೆ ತೆರವುಗೊಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿರುವದಾಗಿ ತಿಳಿದುಬಂದಿದೆ. ಪೆರುಂಬಾಡಿ ರಸ್ತೆ ಕುಸಿತದ ಬಗ್ಗೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರು ವೀಕ್ಷಣೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ.

ಬಾಳುಗೋಡು ವ್ಯಾಪ್ತಿಯಲ್ಲಿ ಬಿಟ್ಟಂಗಾಲ- ಪೆರುಂಬಾಡಿ ರಸ್ತೆ ಮಾರ್ಗ ಮೂರು ಕಡೆಗಳಲ್ಲಿ ಬರೆಕುಸಿತ ಉಂಟಾಗಿದ್ದು, ಭಾರೀ ಗಾತ್ರದ ಮರ ರಸ್ತೆಗೆ ಬೀಳುವ ಸಾಧ್ಯತೆ ಇದ್ದು ಈ ಬಗ್ಗೆ ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಕೂಡಲೇ ಮರ ತೆರವುಗೊಳಿಸುವಂತೆ ಅಲ್ಲಿನ ಗ್ರಾಮಸ್ಥರು ಹಾಗೂ ವಾಹನ ಮಾಲೀಕರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಗೋಣಿಕೊಪ್ಪಲು ಬಸ್ ನಿಲ್ದಾಣ, ಮುಖ್ಯರಸ್ತೆ ಹಾಗೂ ಕುಟ್ಟ ಮುಖ್ಯರಸ್ತೆಗಳೂ ಅಲ್ಲಲ್ಲಿ ಹೊಂಡಗಳಾಗಿ ಪರಿವರ್ತನೆಯಾಗಿದ್ದು ಶೀಘ್ರ ದುರಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- ವರದಿ: ಟಿ.ಎಲ್.ಶ್ರೀನಿವಾಸ್