ಸೋಮವಾರಪೇಟೆ, ಜು.24: ‘ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ.., ಸೋಮವಾರಪೇಟೆ ಪೊಲೀಸ್ ಠಾಣೆಗೆ ಸುಸಜ್ಜಿತ ಜೀಪ್ ಒದಗಿಸಲು ಮುನಸ್ಸು ಮಾಡಿ’ ಹೀಗೆಂದು ಇಲ್ಲಿನ ಪೊಲೀಸರು ಮೊರೆಯಿಡುವ ಕಾಲ ಬಂದಿದೆ.ಸೋಮವಾರಪೇಟೆ ಪೊಲೀಸ್ ಠಾಣೆಗೆ ಒದಗಿಸಿರುವ ಟಾಟಾ ಸುಮೋ ವಾಹನ ತೀರಾ ದುಸ್ಥಿತಿಗೆ ತಲುಪಿದ್ದು, ಅಗತ್ಯ ಸಂದರ್ಭದಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ತೆರಳಲು ಕಷ್ಟಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ 2009 ಮಾಡೆಲ್‍ನ ಟಾಟಾ ಸುಮೋ ವಿಕ್ಟ ವಾಹನವನ್ನು ಒದಗಿಸಲಾಗಿದ್ದು, ವಾಹನದ ಇಂಜಿನ್, ಬ್ಯಾಟರಿ ಸಮಸ್ಯೆ ಪೊಲೀಸರನ್ನು ಕಾಡುತ್ತಿದೆ.ಬಹುತೇಕ ಸಂದರ್ಭಗಳಲ್ಲಿ ಪೊಲೀಸ್ ಜೀಪ್ ಚಾಲೂ ಆಗುವದೇ ಇಲ್ಲ. ಜೀಪ್‍ನ ಚಾಲಕ ಡ್ರೈವಿಂಗ್ ಸೀಟ್‍ನಲ್ಲಿ ಕುಳಿತರೆ ಪೊಲೀಸ್ ಠಾಣಾಧಿಕಾರಿಗಳೂ ಸೇರಿದಂತೆ ಇತರ ಸಿಬ್ಬಂದಿಗಳು ಹಿಂಬದಿಯಿಂದ ಜೀಪ್‍ನ್ನು ತಳ್ಳಬೇಕಾದ ಸ್ಥಿತಿ ಎದುರಾಗಿದೆ.

ಗುಡ್ಡಗಾಡು-ಗ್ರಾಮೀಣ ಪ್ರದೇಶವನ್ನೇ ಹೊಂದಿರುವ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವಷ್ಟು ಗ್ರಾಮಗಳಿಗೆ ಈ ಜೀಪ್ ತೆರಳಲು ಸಾಧ್ಯವೇ ಇಲ್ಲ. ತಾಕೇರಿ, ಕಿರಗಂದೂರು, ಸೂರ್ಲಬ್ಬಿ, ಮಲ್ಲಳ್ಳಿ, ಕುಂಬಾರಗಡಿಗೆಯಂತಹ ಗುಡ್ಡಗಾಡು ಪ್ರದೇಶಕ್ಕೆ ತೆರಳುವ ಸಂದರ್ಭ ಎದುರಾದರೆ ಪೊಲೀಸ್ ಜೀಪ್‍ನ್ನು ಠಾಣೆಯ ಮುಂಭಾಗ ನಿಲ್ಲಿಸಿ ಬಾಡಿಗೆ ವಾಹನವನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೆಸರಿಗಷ್ಟೇ ಪೊಲೀಸ್ ಜೀಪ್ ಎಂದು ಕರೆಯಲಾಗುತ್ತಿದ್ದರೂ, ಪೊಲೀಸ್ ಜೀಪ್‍ಗೆ ಇರಬೇಕಾದ ಕ್ಷಮತೆ ಈ ವಾಹನಕ್ಕಿಲ್ಲ. ಇದರಿಂದಾಗಿ ಹಲವಷ್ಟು ಬಾರಿ ಸಿಬ್ಬಂದಿಗಳು ತಮ್ಮ ಖಾಸಗಿ ಬೈಕ್, ಕಾರುಗಳಲ್ಲಿಯೇ ತೆರಳಿ ಪೊಲೀಸ್ ಇಲಾಖೆಯ ಕೆಲಸ ನಿರ್ವಹಿಸಬೇಕಾಗಿದೆ. ಜೀಪ್‍ನ ಡೋರ್‍ಗೆ ಗಾಜು ಇಲ್ಲ. ಇದರ ಟೈರ್‍ಗಳೂ ಆಯಸ್ಸನ್ನು ಕಳೆದುಕೊಂಡಿದ್ದು, ಆಗಾಗ್ಗೆ ಪಂಕ್ಚರ್ ಆಗುತ್ತಲೇ ಇವೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನಹರಿಸಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ಸುಸಜ್ಜಿತ ವಾಹನ ಒದಗಿಸಲು ಮನಸ್ಸು ಮಾಡಬೇಕಿದೆ. ಆ ಮೂಲಕ ಸಿಬ್ಬಂದಿಗಳ ಸಂಕಷ್ಟವನ್ನು ಪರಿಹರಿಸಬೇಕಿದೆ.

-ವಿಜಯ್ ಹಾನಗಲ್