ಮಡಿಕೇರಿ, ಜು. 23: ವಾಹನ ಅಪಘಾತವೊಂದಕ್ಕೆ ಸಂಬಂಧಿಸಿದಂತೆ ನಷ್ಟದ ಬಾಬ್ತು ವಿಮಾ ಹಣ ಪಾವತಿಸದೆ ವಂಚಿಸಿರುವ ಪ್ರಕರಣವೊಂದರ ಸಂಬಂಧ, ಬಜಾಜ್ ಅಲಿಯನ್ಸ್ ವಿಮಾ ಸಂಸ್ಥೆಗೆ, ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ದಂಡ ವಿಧಿಸಿ ತೀರ್ಪು ನೀಡಿದೆ ಸೋಮವಾರಪೇಟೆ ತಾಲೂಕು ಐಗೂರು ಗ್ರಾಮದ ನಿವಾಸಿ ಹಾಗೂ ವಕೀಲ ಕೆ.ಎಸ್. ಪದ್ಮನಾಭ ಎಂಬವರು ನಗರದ ಫ್ರೆಂಡ್ಲಿ ಮೋಟಾರ್ಸ್ನಿಂದ ಕಾರೊಂದನ್ನು (ಕೆ.ಎ. 12 ಪಿ. 6201) ಖರೀದಿಸಿದ್ದರು. ಈ ಸಂಬಂಧ ಮಾರಾಟಗಾರರ ಶಿಫಾರಸ್ಸು ಮೇರೆಗೆ ಬಜಾಜ್ ವಿಮಾ ಸಂಸ್ಥೆಯಲ್ಲೇ ವಿಮೆ ಮಾಡಿಸಿದ್ದರು.
ಈ ನಡುವೆ 16.8.2015 ರಂದು ಪದ್ಮನಾಭ ತನ್ನ ಮಡದಿ ಹಾಗೂ ಇಬ್ಬರು ಪುತ್ರಿಯರೊಂದಿಗೆ, ತಮ್ಮ ಆಲ್ಟೋ ಕಾರಿನಲ್ಲಿ ನಗರದ ಅರಣ್ಯ ಭವನ ಬಳಿ ತೆರಳುತ್ತಿದ್ದಾಗ ಬೇರೊಂದು ವಾಹನ ಡಿಕ್ಕಿಯಾಗಿ, ಪದ್ಮನಾಭ ಸಹಿತ ಎಲ್ಲರೂ ಗಾಯಗೊಂಡು ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಕಾರನ್ನು ಮಾರಾಟ ಸಂಸ್ಥೆಯಲ್ಲಿ ದುರಸ್ತಿಗೆ ಬಿಟ್ಟಿದ್ದರು. ಈ ವೇಳೆ ಸುಮಾರು ರೂ. 98598 ಮೊತ್ತದಷ್ಟು ಕಾರು ದುರಸ್ಥಿಗೆ ಖರ್ಚು ಆಗಿತ್ತು. ವಿಮಾ ಸಂಸ್ಥೆ ಕೇವಲ ರೂ. 38891 ಮಾತ್ರ ನೀಡಿ ಕೈ ತೊಳೆದುಕೊಂಡಿತ್ತು.
ಈ ಬಗ್ಗೆ ಪದ್ಮನಾಭ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಕಾರು ಜಖಂಗೊಂಡು ದುರಸ್ತಿಗೊಳಿಸಿದ ಪೂರ್ತಿ ಹಣಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ವಿಚಾರಣೆ ಆಲಿಸಿದ ಗ್ರಾಹಕರ ಪರಿಹಾರ ವೇದಿಕೆ ಅಧ್ಯಕ್ಷ ವಿ.ಎ. ಪಾಟೀಲ್ ಹಾಗೂ ಸದಸ್ಯರುಗಳಾದ ಕೆ.ಡಿ. ಪಾರ್ವತಿ ಮತ್ತು ಎಂ.ಎಸ್. ಲತಾ ಅವರುಗಳು, ಕಾರು ಮಾಲೀಕರಿಗೆ ದುರಸ್ತಿ ಬಾಕಿ ಹಣ ರೂ. 60952 ಬಾಕಿಯನ್ನು ಶೇ. 10 ಬಡ್ಡಿ ಸಹಿತ ಪಾವತಿಸಲು ಆದೇಶಿಸಿದ್ದಾರೆ. ಅಲ್ಲದೆ ವೇದಿಕೆ ಖರ್ಚು ಭರಿಸುವಂತೆಯೂ ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ. ಕಾರು ಮಾಲೀಕರ ಪರ ವಕೀಲ ಕವೀಂದ್ರ ವಾದ ಮಂಡಿಸಿದ್ದರು.