ಶನಿವಾರಸಂತೆ, ಜು. 24: ತಮ್ಮ ಸಹೋದರನ ಮನೆ ಪಕ್ಕದಲ್ಲಿದ್ದ 2 ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡಿದ ದೃಶ್ಯವನ್ನು ತಮ್ಮ ಮನೆಯ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ ಮಡಿಕೇರಿ ಉಪವಿಭಾಗದ ಉಪ ಸಂರಕ್ಷಣಾಧಿಕಾರಿ ಆರೋಪಿಗಳನ್ನು ದಸ್ತಗಿರಿ ಮಾಡಿ, ಉಳಿದ ಆರೋಪಿ ಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕಡೆಯವರು ತೊಂದರೆ ಕೊಡುತ್ತಿರುವ ಬಗ್ಗೆ ಆಲೂರು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕಣಗಾಲು ಗ್ರಾಮದ ರೈತ ಯು.ಬಿ. ಚಂಗಪ್ಪ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶನಿವಾರ ರಾತ್ರಿ ಚಂಗಪ್ಪ ಪತ್ನಿ ರುಕ್ಮುಣಿ ಹಾಗೂ ಪುತ್ರಿ ಪವಿತ್ರ ಜೊತೆ ಮನೆಯಲ್ಲಿದ್ದಾಗ ನಾಯಿಗಳು ಬೊಗಳುವಿಕೆ ಕೇಳಿ ಹೊರ ನೋಡಿದಾಗ ಅಪರಿಚಿತ ವ್ಯಕ್ತಿಗಳಿಬ್ಬರು ಗೇಟು ತೆರೆದು ಮನೆಯ ಮುಂಭಾಗಕ್ಕೆ ಅಕ್ರಮ ಪ್ರವೇಶಿಸಿ, ಬಾಗಿಲು ಬಡಿದು 3 ಕಿಟಕಿಗಳ ಗಾಜನ್ನು ಒಡೆದು ಹಾಕಿ ನಷ್ಟಪಡಿಸಿರುವದಾಗಿಯೂ, ಭಯಭೀತರಾದ ತಾವು ಮನೆಯ ಅಟ್ಟದಲ್ಲಿ ಅಡಗಿ ಕುಳಿತುಕೊಂಡಿರು ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಮನೆ ಆವರಣಕ್ಕೆ ಅಕ್ರಮ ಪ್ರವೇಶ ಮಾಡಿ ರೂ. 2,500 ನಷ್ಟಪಡಿಸಿದಲ್ಲದೇ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳ ಬಗ್ಗೆ ಹಾಗೂ ಗಂಧದ ಮರಗಳ ಕಳುವು ಪ್ರಕರಣದಲ್ಲಿ ಭಾಗಿಗಳಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಚಂಗಪ್ಪ ಆಗ್ರಹಿಸಿದ್ದಾರೆ. ದೂರಿನ ಅನ್ವಯ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ವಿಧಿ 448, 427, 506 ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.