ಆಲೂರುಸಿದ್ದಾಪುರ, ಜು. 24: ಸಂಘಟನೆಯಿಂದ ಮಾತ್ರ ಬಲಿಷ್ಟ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಜಿಲ್ಲಾ ವೀರಶೈವ ಮಹಾಸಭಾದ ವತಿಯಿಂದ ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಾವದೇ ಒಂದು ಸಮಾಜ ಬಲಿಷ್ಟವಾಗಬೇಕಾದರೆ ಪರಸ್ಪರ ಸಂಘಟಿತರಾಗಬೇಕು. ಸಮಾಜದ ಎಲ್ಲಾ ವರ್ಗದ ಜನತೆ ತಾರತಮ್ಯವಿಲ್ಲದೆ ಒಂದೆಡೆ ಸೇರಬೇಕೆಂದು ಆಶಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಮಾತನಾಡಿ ವೀರಶೈವ ಜನಾಂಗ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಕಳೆದ ಎರಡು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಯುವ ಜನತೆಯನ್ನು ಸಂಘಟಿಸುವ ದೃಷ್ಟಿಯಿಂದ ಕ್ರೀಡಾ ಕೂಟ ಆಯೋಜಿ ಸಲಾಗುತ್ತಿದೆ. ಈ ಕಾರ್ಯಕ್ರಮಗಳಿಗೆ ಜನಾಂಗದವರು ಸಹಕರಿಸುವದ ರೊಂದಿಗೆ ಪಾಲ್ಗೊಳ್ಳಬೇಕೆಂದರು.
ಸಭೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಜಿಲ್ಲೆಯ ವೀರಶೈವ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಜಿಲ್ಲಾ ಮಟ್ಟದ ವೀರಶೈವ ಕ್ರೀಡಾ ಕೂಟವನ್ನು ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಸೋಮವಾರಪೇಟೆಯಲ್ಲಿ ಆಯೋಜಿಸುವಂತೆ ತೀರ್ಮಾನಿಸಿ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ವಿ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಪ್ರತಿಭಾ ಪುರಸ್ಕಾರ ಸಮಿತಿ ಎಸ್.ಮಹೇಶ್ ಅಧ್ಯಕ್ಷತೆಯಲ್ಲಿ ಕ್ರೀಡಾ ಸಮಿತಿ ರಚಿಸುವಂತೆ ತೀರ್ಮಾನಿಸಲಾಯಿತು.
ಶಿಡಿಗಳಲೆ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಜೆ.ಎಂ.ಕಾಂತರಾಜು, ಉಪಾಧ್ಯಕ್ಷರುಗಳಾದ ಹಾಲಪ್ಪ, ನಾಗಣ್ಣ, ಎಸ್.ಎಸ್.ಸುರೇಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಸದಸ್ಯೆ ಜಲಜಾಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.