ಕುಶಾಲನಗರ, ಜು. 23: ಸವಿತಾ ಸಮಾಜದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದತ್ತ ಗಮನಹರಿಸಬೇಕಾಗಿದೆ ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ್ ಕರೆ ನೀಡಿದ್ದಾರೆ.ಕುಶಾಲನಗರದ ಸವಿತಾ ಸಮಾಜದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕುಲ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುವ ಬದಲಾಗಿ ಕಾಲಕ್ಕೆ ತಕ್ಕಂತೆ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಧಾ ಪುಟ್ಟರಾಜು ಮಾತನಾಡಿ, ಕುಲಬಾಂಧವರು ಸಂಘಟಿತರಾಗಿ ತಮ್ಮ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭ 2016-17ರ ಲೆಕ್ಕಪತ್ರ ಮಂಡನೆ ನಡೆಯಿತು. ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷ ವೈ. ಪುಟ್ಟರಾಜು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಿವಣ್ಣ, ಪ್ರತಿನಿಧಿ ರಾಮಕೃಷ್ಣ, ಕುಶಾಲನಗರ ಸವಿತಾ ಸಮಾಜ ಅಧ್ಯಕ್ಷ ಜಗದೀಶ್ ಭಂಡಾರಿ, ಉಪಾಧ್ಯಕ್ಷ ದೊರೆಸ್ವಾಮಿ, ಕಾರ್ಯದರ್ಶಿ ಎಂ.ಎಸ್. ರವೀಂದ್ರ, ಖಜಾಂಚಿ ಶಿವಕುಮಾರ್, ವೀರಾಜಪೇಟೆ ಪ್ರತಿನಿಧಿ ದಿನೇಶ್, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಅಶೋಕ್ ಮತ್ತಿತರರು ಇದ್ದರು.