ನಾಪೋಕ್ಲು, ಜು. 23: ವಾಸದ ಮನೆಯ ಹಕ್ಕುಪತ್ರ, ಕುಡಿಯುವ ನೀರು, ಸಂಪರ್ಕ ರಸ್ತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಬಡಕೇರಿ ಧವಸಭಂಡಾರದ ಕಟ್ಟಡದಲ್ಲಿ ಹೊದ್ದೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಪಿ. ದಿನೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಹೊದ್ದೂರು ಗ್ರಾಮ ಸಭೆಯಲ್ಲಿ ಪ್ರಮುಖವಾಗಿ ಗ್ರಾಮಸ್ಥರು ಪ್ರಸ್ತಾಪಿಸಿದ್ದು ಕಂಡು ಬಂತು. ಮೊದಲಿಗೆ ಇಲಾಖಾ ಅಧಿಕಾರಿಗಳ ಹಾಜರಾತಿಯ ಬಗ್ಗೆ ಪ್ರಸ್ತಾಪ ಏರ್ಪಟ್ಟು ಇಲಾಖಾ ಅಧಿಕಾರಿಗಳು ಗ್ರಾಮಸಭೆಗೆ ಹಾಜ ರಾಗುತ್ತಿಲ್ಲ. ಆದ್ದರಿಂದ ಇಲಾಖಾ ಮಾಹಿತಿಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಇದಕ್ಕೆ ಸೂaಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಆ ಬಳಿಕ ಪಾಲೆ ಮಾಡಿನಲ್ಲಿ ವಾಸವಾಗಿರುವವರಿಗೆ ಮೂಲಭೂತ ಸೌಕರ್ಯಗಳು ಲಭಿಸುತ್ತಿಲ್ಲ. ವಾಸದ ಮನೆಯ ಹಕ್ಕುಪತ್ರ ದೊರಕುತ್ತಿಲ್ಲ. ಎಂಬ ವಿಷಯಗಳ ಚರ್ಚೆ ಗ್ರಾಮ ಸಭೆಯ ಬಹುಪಾಲು ಅವಧಿಯನ್ನು ನುಂಗಿಹಾಕಿತು. ಈ ಸಂದರ್ಭ ಬಹುಜನ ಸಮಾಜವಾದಿ ಪಕ್ಷದ ಪ್ರಮುಖರಾದ ಮೊಣ್ಣಪ್ಪ ಮತ್ತು ಇತರರು ಅಲ್ಲಿನ ನಿವಾಸಿಗಳಿಗೆ ಸೂಕ್ತ ಮನೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲಾತಿಗಳ ಸಮಸ್ಯೆ ಬಗೆಹರಿಯದೆ ಮುಂದುವರಿದಿದೆ. ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಮಶಾನಕ್ಕೆ ಎರಡು ಏಕರೆ ಹಾಗೂ ಸಾಮಾನ್ಯರಿಗೆ ಎರಡು ಏಕರೆ ಜಾಗ ಮಂಜೂರಾಗಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಯಾವದೇ ಕಾರಣಕ್ಕೂ ಈ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬ ಮಾತು ಕೇಳಿಬಂತು. ಬಳಿಕ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ನಮ್ಮ ಸಮಸ್ಯೆಗಳಿಗೆ ಸೂಕ್ತ ಸ್ಪಂದನ ನೀಡುತ್ತಿಲ್ಲ ಎಂದು ಪಾಲೆಮಾಡು ಗ್ರಾಮಸ್ಥರು ಆರೋಪಿಸಿದರು.
ಮಧ್ಯಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಗ್ರಾಮ ವಾಸಿಗಳಿಗೆ ಮೂಲಭೂತ ಸೌಕರ್ಯ ಹಾಗೂ ಇತರ ಬೇಡಿಕೆಗಳಿಗೆ ನಾವು ಪ್ರಯತ್ನಪಡುತ್ತಿದ್ದೇವೆ. ಆದರೆ ಇದಕ್ಕೆ ಅಧಿಕಾರಿಗಳು ಕಾನೂನು ಅಡಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಕೆಲವು ಕಾನೂನು ತೊಡಕುಗಳು ಎದುರಾಗಿವೆ ಎನ್ನಲಾಗಿದ್ದು ನಿಮ್ಮ ಮನವಿಯನ್ನು ಪಂಚಾಯಿತಿ ಮೂಲಕ ಅಧಿಕಾರಿಗಳಿಗೆ ಕಳುಹಿಸಲಾಗುವದು. ಅಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವದು ಎಂದರು. ಇದಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ದನಿಗೂಡಿಸಿದರು.
ಪ್ರತಿ ಗ್ರಾಮಸಭೆಯಲ್ಲಿ ಪಾಲೇಮಾಡು ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದು ಇತರ ಗ್ರಾಮಗಳ ಸಮಸ್ಯೆಗಳ ಬಗ್ಗೆ ಸಮಯ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂತು. ಬಳಿಕ ಇತರ ಗ್ರಾಮಸ್ಥರ ಕುಂದುಕೊರತೆಗಳ ಅವಕಾಶ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲೇಮಾಡಿನ 15 ಬೇಡಿಕೆಗಳ ನ್ನೊಳಗೊಂಡ ಮನವಿಯನ್ನು ವಾಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮನವಿಮಾಡಲಾಯಿತು. ಸಭೆಯಲ್ಲಿ ಹಾಜರಿದ್ದ ವಿವಿಧ ಅಧಿಕಾರಿಗಳು ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಪಂಚಾಯಿತಿ ಉಪಾಧ್ಯಕ್ಷೆ ಕುಸುಮ, ಎಪಿಎಂಸಿ ಸದಸ್ಯ ಜಯ ನಂಜಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಅಜಯ್ಕುಮಾರ್, ಹಂಸ, ಉಮೇಶ್, ನಂದಾ ಕಾರ್ಯಪ್ಪ, ಭಾರತಿ, ಪುಷ್ಪ, ತ್ಯಾಗಿ, ಪಿರ್ದ್ಸ್ ಇತರರು ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಸ್ವಾಗತಿಸಿ, ಪಂಚಾಯಿತಿ ನಡಾವಳಿ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ದಿನೇಶ್ ವಂದಿಸಿದರು.