ಮಡಿಕೇರಿ, ಜು. 24: ಕೊಡಗು ಅಂದಾಕ್ಷಣ ಕಣ್ಮುಂದೆ ಸುಳಿಯುವದು ಬೆಟ್ಟ-ಗುಡ್ಡಗಳು.., ಪ್ರಕೃತಿ ಸೌಂದರ್ಯ, ತಂಪಾದ ವಾತಾವರಣ.., ಆದರೆ ಆ ಬೆಟ್ಟ-ಗುಡ್ಡಗಳ ನಡುವಿನ ಸಮಸ್ಯೆಗಳು ಮಾತ್ರ ಯಾರಿಗೂ ಕಾಣಸಿಗದು. ಕೊಡಗು ಅಭಿವೃದ್ಧಿಯತ್ತ ಸಾಗುತ್ತಿದೆಯಾದರೂ ಕುಗ್ರಾಮಗಳಲ್ಲಿನ ಸಮಸ್ಯೆಗಳು ಇನ್ನೂ ಹಾಗೆಯೇ ಇದೆ ಎಂಬದಕ್ಕೆ ಸಾಕ್ಷಿ ಈ ‘ಕುಡಿಯ ಹಾರಿದ ಕಲ್ಲು...’‘ಕುಡಿಯ ಹಾರಿದ ಕಲ್ಲು’ ಎಂದು ಕರೆಯಲ್ಪಡುವ ಈ ಕುಗ್ರಾಮ ಇರುವದು ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಣ್ಣಂಗೇರಿ ಗ್ರಾಮದಲ್ಲಿ. ಇಲ್ಲಿ ಸರಿಯಾದ ರಸ್ತೆಗಳಿಲ್ಲ.., ವಾಹನ ಸಂಚಾರಕ್ಕೆ ಸಂಚಕಾರ ಇರುವ ಗ್ರಾಮದಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ ಇಲ್ಲಿನ ಮೂಲ ನಿವಾಸಿಗಳು...

(ಮೊದಲ ಪುಟದಿಂದ) ಹೊರಜಗತ್ತಿಗೆ ಪರಿಚಯವೇ ಇಲ್ಲದಂತಿರುವ ಗ್ರಾಮಗಳಲ್ಲಿ ಮಡಿಕೇರಿ ನಗರದಿಂದ ಅನತಿ ದೂರದಲ್ಲಿರೋ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಕೂಡಾ ಒಂದಾಗಿದೆ. ಮಡಿಕೇರಿಯಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಜಿಲ್ಲಾಕೇಂದ್ರ ಮಡಿಕೇರಿಯ ಪಶ್ಚಿಮ ಹಾಗೂ ದಕ್ಷಿಣದ ನಡುವಿರುವ ಬೆಟ್ಟದ ಮೇಲೆ ಈ ಗ್ರಾಮ ಇದೆ. ಎಲ್ಲೋ ತೋಟದ ಒಳಗೆ ಅಥವಾ ಬೆಟ್ಟದ ಮೇಲೆ ದೂರ ದೂರದಲ್ಲಿ ಮನೆಗಳಿವೆ. ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ಹೆಚ್ಚಾಗಿ ವಂಚಿತವಾಗಿವೆ. ಇಲ್ಲಿನ ಗ್ರಾಮದ ಸಮಸ್ಯೆ ಒಂದಲ್ಲ ಎರಡಲ್ಲ, ವಾಸಿಸ್ತಿರೋ ಭೂಮಿಗೆ ಸರಿಯಾಗಿ ಪಟ್ಟೆ ಇಲ್ಲ, ಮನೆಗೆ ಹೋಗೋಕೆ ಸುಸಜ್ಜಿತ ರಸ್ತೆ ಇಲ್ಲ, ಕಾಡಾನೆ ಹಾವಳಿ, ಕುಸಿಯುವ ಬರೆ, ವಾರಗಟ್ಟಲೆ ಕರೆಂಟ್ ಇರಲ್ಲ, ಮೊಬೈಲ್ ನೆಟ್ ವರ್ಕ್ ಅಂತೂ ಸಿಗೋದೇ ಕಷ್ಟ ಹೀಗೆ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿದೆ ಗ್ರಾಮ...!

ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ, ಇಂದಿಗೂ ಇಂತಹ ಹಳ್ಳಿಗಳು, ಹೆಸರೇ ತಿಳಿಯದ ಕುಗ್ರಾಮಗಳು ನಮ್ಮಲ್ಲಿವೆ ಎಂದರೆ ಅದು ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯದ ಕೈಗನ್ನಡಿ. ಇಂತಹ ರಸ್ತೆಯಲ್ಲಿ ಇಂದಿಗೂ ಈ ಭಾಗದ ಜನರು ನಡೆದೇ ಸಾಗುತ್ತಾರೆ, ಹೆಚ್ಚು ಸಾಮಥ್ರ್ಯ ಇಲ್ಲದ ವಾಹನಗಳು ಇಲ್ಲಿ ಈ ಮಣ್ಣಿನ ರಸ್ತೆಯಲ್ಲಿ ಸಾಗುವದೇ ಇಲ್ಲ. ರಸ್ತೆಗೆ ಬೀದಿ ದೀಪಗಳಿಲ್ಲ. ಕಾಡಾನೆ ಹಾವಳಿ ಬೇರೆ, ಮಕ್ಕಳನ್ನು ಪಟ್ಟಣದ ಶಾಲೆಗೆ ಕಳುಹಿಸೋದೇ ಒಂದು ದೊಡ್ಡ ತಲೆನೋವಿನ ವಿಚಾರ, ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಹೈವೆ ರಸ್ತೆಗೆ, ವಾಹನ ಬರುವ ಸ್ಥಳಕ್ಕೆ ಬಿಟ್ಟು ಬರಬೇಕು, ನಂತರ ಸಂಜೆ ಮತ್ತೆ ನಡೆದುಕೊಂಡೇ ಸಾಗಿ ಆ ಮಕ್ಕಳನ್ನು ವಾಪಸ್ಸು ಮನೆಗೆ ಕರೆತರಬೇಕು. ಮನೆಗೆ ಬೇಕಾಗೋ ದಿನನಿತ್ಯದ ಸಾಮಾನು ಸರಂಜಾಮುಗಳನ್ನ ಹೊತ್ತುಕೊಂಡು ನಡೆದೇ ಸಾಗಬೇಕು. ಇನ್ನೂ ಇಲ್ಲಿಗೆ ಸಾಮಾನ್ಯವಾದ ಡಾಂಬರು ರಸ್ತೆ ಬಾಳಿಕೆ ಬರೊಲ್ಲ, ಬೆಟ್ಟ ಗುಡ್ಡದ ಜೊತೆಗೆ ಜೌಗು ಮಣ್ಣು ಇರೋದ್ರಿಂದ ಕಾಂಕ್ರಿಟ್ ರಸ್ತೆಯೇ ಆಗಬೇಕು, ಭೂ ಕುಸಿಯುವದನ್ನು ತಡೆಯಲು ತಡೆಗೋಡೆಗಳ ನಿರ್ಮಾಣ ಮಾಡಬೇಕು. ಎಲ್ಲೋ ದೂರ ದೂರ ಇರೋ ಒಂದೊಂದು ಮನೆಗಾಗಿ ಇಷ್ಟೊಂದು ಕಷ್ಟಪಟ್ಟು ರಸ್ತೆ ನಿರ್ಮಿಸಬೇಕಿರುವ ಕಾರಣಕ್ಕೆ ಇನ್ನೂ ಸರಿಯಾದ ರಸ್ತೆಗಳು ಸರ್ಕಾರದಿಂದ ಆಗಿಯೇ ಇಲ್ಲ. ಮಣ್ಣಿನ ರಸ್ತೆಯಲ್ಲೇ ಈ ಭಾಗದ ಜನರ ಬದುಕು ಸಾಗುತ್ತಿದೆ.

ಜಿಲ್ಲಾ ಕೇಂದ್ರದಿಂದ ಬೆರಳೆಣಿಕೆ ದೂರದಲ್ಲಿರೋ ಬೆಟ್ಟದ ತಪ್ಪಲಲ್ಲಿ ಶತಮಾನಗಳಿಂದ ಬದುಕನ್ನ ಕಟ್ಟಿಕೊಂಡಿರೋ ಈ ಜನರಿಗೆ ರಸ್ತೆಯೊಂದೇ ಪ್ರಮುಖ ಸಮಸ್ಯೆಯಲ್ಲ, ಇರೋ ಮಣ್ಣಿನ ರಸ್ತೆಗೆ ವಿದ್ಯುತ್ ದೀಪ ಇಲ್ಲ, ಕಾಡಾನೆಗಳ ಸಮಸ್ಯೆ ಬಗೆಹರಿದಿಲ್ಲ, ದಿನವೂ ದುಡಿದು ತಿನ್ನುತ್ತಿರುವ ಭೂಮಿ ಇವರದು ಎಂಬದಕ್ಕೆ ಸೂಕ್ತ ದಾಖಲೆಗಳೂ ಇಲ್ಲ. ಬದುಕು ಕಟ್ಟಿಕೊಳ್ಳಲು ಕುಗ್ರಾಮವಾದರೇನು ಎಂದು ಜೀವನ ಮಾಡುತ್ತಿರುವವರಿಗೆ ಸ್ವಂತದ್ದು ಅಂತಾ ಏನೂ ಇಲ್ಲ. ಓಟು ಕೇಳೋಕೆ ಬರೋರು ಸಮಸ್ಯೆ ಆಲಿಸೋಕೆ ಇಲ್ಲವಾಗಿದ್ದಾರೆ ಎಂಬದು ಈ ಭಾಗದ ಜನರ ನೋವಿನ ಮಾತುಗಳು.

ಇನ್ನೂ ಈ ಸಮಸ್ಯೆಗಳ ಬಗ್ಗೆ ಪಂಚಾಯ್ತಿ ಸಾಧ್ಯವಾದಷ್ಟು ಕೆಲಸ ಮಾಡ್ತಿದೆ. ಆದ್ರೂ ಸಮಸ್ಯೆ ಬಗೆಹರಿಸೋಕೆ ಆಗ್ತಿಲ್ಲ ಅನ್ನೋದು ಆಡಳಿತ ನಡೆಸೋರ ಮಾತುಗಳು, ಅದೇನೇ ಆಗಲೀ ಈ ಭಾಗದ ಜನರ ಸಮಸ್ಯೆಗಳು ಬಗೆಹರಿಸಲಿ ಎಂಬದು ನಮ್ಮ ಆಶಯ.