ಕರಿಕೆ, ಜು. 25: ಭಾರತದ ಒಂದು ಮೂಲೆಯಲ್ಲಿ ಕರಿಕೆ ಗ್ರಾಮ ನೆಲೆಸಿದೆ. ದೇಶದ ರಾಜಧಾನಿ ನವದೆಹಲಿ ಸಹಸ್ರಾರು ಮೈಲಿಗಳ ಅಂತರದಲ್ಲಿದೆ. ಆದರೆ ಪ್ರಧಾನಿ ಮೋದಿ ಅವರು ಈ ಗ್ರಾಮದ ದೂರವಾಣಿ ಸಮಸ್ಯೆ ತಮ್ಮ ಗಮನಕ್ಕೆ ಬಂದಾಗ ಸ್ಪಂದಿಸಿದ್ದಾರೆ ಎನ್ನುವದು ಆಶ್ಚರ್ಯ ಮೂಡಿಸಿದರೂ ನೈಜ ಬೆಳವಣಿಗೆ ಎನ್ನುವದಕ್ಕೆ ‘ಶಕ್ತಿ’ಗೆ ದಾಖಲಾತಿ ಲಭ್ಯವಿದೆ.ಕರಿಕೆಯ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಹೊದ್ದೆಟ್ಟಿ ಸುಧೀರ್‍ಕುಮಾರ್ ಅವರು ಇ-ಮೇಲ್‍ನಲ್ಲಿ ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ ಒಂದನ್ನು ಕಳುಹಿಸಿದ್ದರು. ಇದಕ್ಕೆ ಕೇವಲ 15 ದಿನಗಳಲ್ಲಿ ಪ್ರಧಾನಿ ಅವರ ಕಚೇರಿಯಿಂದ ಉತ್ತರ ಲಭಿಸಿದೆ. ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅವರು ಉತ್ತರಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ನಿರ್ದೇಶಿಸಿದ್ದಾರೆ. ಆದರೆ ಇದೇ ಮನವಿಯನ್ನು ಸಂಸದ ಪ್ರತಾಪ್‍ಸಿಂಹ ಅವರಿಗೆ ಸಲ್ಲಿಸಿದ್ದು, ಇದುವರೆಗೂ ಅವರಿಂದ ಉತ್ತರ ಲಭ್ಯವಾಗಿಲ್ಲ. ಕರಿಕೆಯಲ್ಲಿ ದೂರವಾಣಿ ಟವರ್ ಅಸ್ತಿತ್ವದಲ್ಲಿದೆ. ಆದರೆ ಈ ಮೊಬೈಲ್ ಟವರ್ ನಿಷ್ಪ್ರಯೋಜಕವೆನಿಸಿದೆ. ದೇಶದಾದ್ಯಂತ ಅಂತರ್ಜಾಲ ವ್ಯವಸ್ಥೆ ಬೆಳವಣಿಗೆ ಕಂಡಿದ್ದರೂ ಕೊಡಗು - ಕೇರಳ ಗಡಿಪ್ರದೇಶವಾದ ಕರಿಕೆ ಕುಗ್ರಾಮವೆಂಬಂತೆ ಅಂತರ್ಜಾಲ ಸೌಲಭ್ಯ, ಇ- ಬ್ಯಾಂಕಿಂಗ್ ಸೌಲಭ್ಯ, ವೈಫೈ ಸಂಪರ್ಕಗಳು ಇದುವರೆಗೂ ಲಭ್ಯವಾಗಿಲ್ಲ. ಕರ್ನಾಟಕ ಗಡಿದಾಟಿ ಕೇರಳದ ತಾಣದಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕರಿಕೆ ಗ್ರಾಮಕ್ಕೆ ದೂರವಾಣಿ ಸಂಪರ್ಕದ ಆಧುನಿಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಸುಧೀರ್ ತಮ್ಮ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದರು.

ಇದೀಗ ‘ಶಕ್ತಿ’ಗೆ ತಿಳಿದು ಬಂದಿರುವಂತೆ ಪ್ರಧಾನಿ ಕಚೇರಿಯಿಂದ ಈ ಕುರಿತು ಕ್ರಮಕೈಗೊಳ್ಳುವಂತೆ ಜಿಲ್ಲಾ ದೂರವಾಣಿ ಇಲಾಖಾ ಸಂಪರ್ಕಾಧಿಕಾರಿಗಳಿಗೆ ನಿರ್ದೇಶನ ಪತ್ರ ರವಾನೆಯಾಗಿದ್ದು, ಅಧಿಕಾರಿಗಳು ಶೀಘ್ರದಲ್ಲೇ ಕರಿಕೆಗೆ ಡಿಜಿಟಲ್ ಬಳಕೆಗೆ ಅಗತ್ಯವಾದ ಯಾಂತ್ರೀಕೃತ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆ ನೀಡಿರುವದಾಗಿ ತಿಳಿದು ಬಂದಿದೆ.