ಮಡಿಕೇರಿ, ಜು. 25: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಕೇಳುವದು ಭಾರತದ ಅಖಂಡತೆಎ ಪ್ರಾಣಕೊಟ್ಟಿರುವ, ಗಡಿಯಲ್ಲಿ ಬಲಿದಾನ ಗೈದ ದೇಶ ಪ್ರೇಮಿ ಕೊಡವರಿಗೆ ಮಾಡುವ ಅಪಮಾನವಾಗಿದ್ದು, ಅಂತಹ ಕರ್ನಾಟಕದಲ್ಲಿ ಕೊಡವರಿಗೆ ಇರಲು ಇಷ್ಟವಾಗಲಾರದು ಮತ್ತು ಸಹಿಸಲಾಗದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೊಡವರನ್ನು ಸೇರಿಸಿಕೊಂಡು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಕೇಳಬೇಡಿ ಇದು ಸಂವಿಧಾನಬಾಹಿರ ಹಾಗೂ ನಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕೆ ಸವಾಲು ಎಂದು ನಾಚಪ್ಪ ಹೇಳಿದ್ದಾರೆ.

ಪ್ರತ್ಯೇಕ ಧ್ವಜಕ್ಕೆ ಕೊಡವ ಜನಾಂಗದ ಸಹಮತವಿಲ್ಲ. ಭಾರತ ಒಕ್ಕೂಟದಲ್ಲಿ ಕೊಡವರಿಗೆ ಸ್ವಾಯತ್ತ ಕೊಡವ ಲ್ಯಾಂಡ್ ಅಥವ ಕೊಡಗು ಕೇಂದ್ರಾಡಳಿತ ಪ್ರದೇಶ, ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ, ಮುಂಬೈ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಮತ್ತು ತುಳು ನಾಡಿಗೆ ಪ್ರತ್ಯೇಕ ರಾಜ್ಯ ನೀಡಿದ್ದಲ್ಲಿ ಈ ರೀತಿ ಭಾರತ ಒಕ್ಕೂಟ ಛಿದ್ರಗೊಳಿಸುವ ಶಕ್ತಿಗಳನ್ನು ದಮನ ಮಾಡಬಹುದು ಹಾಗೂ ಒಡಕು ಧ್ವನಿಯನ್ನು ಶಮನಗೊಳಿಸುವದರ ಮೂಲಕ ಕರ್ನಾಟಕ ಬೇರೆ ರಾಷ್ಟ್ರವಾಗುವದನ್ನು ವಿಫಲಗೊಳಿಸಬಹುದು.

ಕೊಡವರ ನಿಷ್ಠೆ ಏನಿದ್ದರೂ ಭಾರತಕ್ಕೆ, ಭಾರತ ಸಂವಿಧಾನಕ್ಕೆ, ಭಾರತ ಗಣರಾಜ್ಯಕ್ಕೆ, ಅಶೋಕ ಚಕ್ರಕ್ಕೆ ಮತ್ತು ತ್ರಿವರ್ಣ ಧ್ವಜಕ್ಕೆ ಹಾಗೂ ಭಾರತ ಒಕ್ಕೂಟದ ಇನ್ನೊಂದು ರಾಜ್ಯವಾಗಿ ಸ್ವಾಭಿಮಾನದಿಂದಿರಲು ಬಯಸುತ್ತೇವೆ. ವಿನಃ ಉದ್ದೇಶಿತ ಕರ್ನಾಟಕ ರಾಷ್ಟ್ರದೊಂದಿಗೆ ಅಲ್ಲ ಎಂದೂ ನಾಚಪ್ಪ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.