ಗೋಣಿಕೊಪ್ಪಲು, ಜು. 25 : ತೋಟದ ಕಾರ್ಮಿಕರ ಮೇಲೆರೆಗಲು ಬಂದ ಕಾಡಾನೆಗಳಿಂದ ಕಾರ್ಮಿಕರನ್ನು ತಿತಿಮತಿ ಕ್ಷಿಪ್ರ ಕಾರ್ಯ ಪಡೆಯಿಂದ ಗಾಳಿಗೆ ಗುಂಡು ಹಾರಿಸಿ ರಕ್ಷಿಸಿದ ಘಟನೆ ನಡೆದಿದೆ.

ತೋಟ ಕೆಲಸ ಮುಗಿಸಿ ತೆರಳುವ ಸಂದರ್ಭ ತೋಟದಲ್ಲಿ ಅಡ್ಡ ಬಂದ ಕಾಡಾನೆಗಳ ಹಿಂಡು ಕಾರ್ಮಿಕರ ಮೇಲೆರಗಲು ಮುಂದಾಗಿದೆ. ಈ ಸಂದರ್ಭ ಕಾರ್ಯಪಡೆಯ ತಂಡ ಗಾಳಿಗೆ ಗುಂಡು ಹಾರಿಸಿದ ಪರಿಣಾಮ ಆನೆಗಳು ಹೆದರಿ ತೋಟ ಸೇರಿ ಕೊಂಡಿವೆ. ಇದರಿಂದಾಗಿ ಕಾಡಾನೆ ಧಾಳಿಯಿಂದ ಕಾರ್ಮಿಕರು ಪಾರಾಗಿದ್ದಾರೆ.

ಸಂಜೆ ಅಂಬುಕೋಟೆಯ ಅನ್ಸಾರಿ ಕಾಫಿ ತೋಟದಲ್ಲಿ ಕಾಡಾನೆ ಇರುವಿಕೆಯ ಮಾಹಿತಿ ಪಡೆದ ಕ್ಷಿಪ್ರ ಕಾರ್ಯಪಡೆ ತಂಡ ತೋಟದಲ್ಲಿ ಕಾದು ಸಂಜೆವರೆಗೂ ಕೆಲಸ ನಡೆಸಲು ಅನುವು ಮಾಡಿಕೊಟ್ಟಿದ್ದರು. ಸಂಜೆ ಕಾರ್ಮಿಕರು ಕೆಲಸ ಮುಗಿಸಿ ತೋಟದಿಂದ ತೆರಳುವ ಸಂದರ್ಭ ಮೂರು ಕಾಡಾನೆಗಳು ದಾಳಿ ನಡೆಸಲು ಮುಂದಾದವು. ಕಾರ್ಮಿಕರ ಮೇಲೆ ಕಾಡಾನೆಗಳು ಮುನ್ನುಗ್ಗುವ ಸಂದರ್ಭ ಕಾರ್ಯಪಡೆ ಗಾಳಿಗೆ ಗುಂಡು ಹಾರಿಸಿತು. ಬೆಚ್ಚಿದ ಆನೆಗಳ ಹಿಂಡು ಕಾಡು ಸೇರಿ ಕೊಂಡವು.

ಈ ಸಂದರ್ಭ ಕ್ಷಿಪ್ರ ಪಡೆಯ ಸಂಜು, ರಾಜು, ಸುರೇಶ್, ಮೋಹನ್, ದಿನೇಶ್ ಹಾಗೂ ಜೆ ಆರ್ ಸುರೇಶ್ ಪಾಲ್ಗೊಂಡಿದ್ದರು.