ಆಲೂರುಸಿದ್ದಾಪುರ, ಜು. 25: ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಇಲ್ಲಿನ ಹಿತ್ತಲಕೇರಿ ಎಳನೀರುಗುಂಡಿ, ಮುಳ್ಳೂರು, ರಾಮೇನಹಳ್ಳಿ, ನಂದಿಗುಂದ, ಹೊನ್ನೇಕೊಪ್ಪಲು, ಚೌಡೆನಹಳ್ಳಿ, ಗೋಪಾಲಪುರ, ಮಾದೇಗೋಡು, ಮಾಲಂಬಿ, ಕಣಿವೆ ಬಸವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟ ಸೇರಿದಂತೆ ಗದ್ದೆಗಳಿಗೆ ಕಾಡಾನೆಗಳು ಲಗ್ಗೆಯಿಡುತ್ತಿವೆ.

ಈ ವ್ಯಾಪ್ತಿಯಲ್ಲಿ ಭತ್ತದ ಬೀಜಗಳನ್ನು ಬಿತ್ತನೆ ಮಾಡಿರುವ ರೈತರ ಗದ್ದೆಗಳಿಗೆ ನಿರಂತರವಾಗಿ ಕಾಡಾನೆಗಳು ಬರುತ್ತಿದ್ದು, ಇದೀಗ ನಾಟಿ ಮಾಡಲು ತಯಾರಿಯಲ್ಲಿರುವ ಭತ್ತದ ಪೈರುಗಳನ್ನು ತುಳಿಯುತ್ತಿದ್ದು, ಮರಿಯಾನೆ ಸಹಿತ ಸುಮಾರು 2 ರಿಂದ ಮೂರು ಆನೆಗಳಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮರಿಯಾನೆ ಹೋದಲ್ಲೆ ಈ ದೊಡ್ಡ ಆನೆಗಳು ಹೋಗುತ್ತಿದ್ದು, ಕಾಫಿ ತೋಟದಲ್ಲಿ ಸಿಗುವಂತಹ ಬಾಳೆ ಹಾಗೂ ದಶಕಗಳ ಹಿಂದಿನ ದೊಡ್ಡ ದೊಡ್ಡ ತೆಂಗು, ಅಡಿಕೆ ಮರಗಳನ್ನು ನೆಲಕ್ಕುರುಳಿಸಿದ್ದು, ಇನ್ನಿತರ ಬೆಳೆಗಳನ್ನು ತುಳಿದು ಧ್ವಂಸ ಮಾಡುತ್ತಿದೆ.

ಅರಣ್ಯ ಇಲಾಖೆ ವತಿಯಿಂದ ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಬಾರದ ರೀತಿಯಲ್ಲಿ ಅರಣ್ಯದಂಚಿನಲ್ಲಿ ಕಾಡಾನೆ ಕಂದಕಗಳನ್ನು ಮಾಡಲಾಗಿತ್ತು. ಕಣಿವೆ ಬಸವನಹಳ್ಳಿಯಲ್ಲಿ ಕಾಡಿನ ಸುತ್ತ ಕಂದಕ ತೆಗೆದು ಗ್ರಾಮದೊಳಗೆ ಕಾಡಾನೆ ಕಾಡಿನಿಂದ ಬರಲು ದಾರಿ ಮಾಡಿಕೊಟ್ಟಂತಿದ್ದು, ಇದರಿಂದ ಕಾಡಾನೆಗಳು ನೇರವಾಗಿ ಕಾಡಿನಿಂದ ಕಣಿವೆ ಬಸವನಹಳ್ಳಿ ಗ್ರಾಮದೊಳಗೆ ಬರುತ್ತಿದೆ ಒಟ್ಟಾರೆ ಅವೈಜ್ಞಾನಿಕ ರೀತಿಯಲ್ಲಿ ಕಂದಕ ನಿರ್ಮಿಸಿರುವದು ಈ ಕಾಡಾನೆಗಳು ನಾಡಿನತ್ತ ಬರುತ್ತಿರುವದೆ ಸಾಕ್ಷಿಯಾಗಿದೆ.

ಇಲ್ಲಿಯ ಕಾಫಿ ತೋಟದ ಸುತ್ತ ದೊಡ್ಡ ಮರದ ದಿಮ್ಮಿಗಳನ್ನು ಹಾಕಿ ಬೆಂಕಿ ಹಾಕುವ ಹಾಗೂ ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಕಾಡಾನೆಗಳನ್ನು ರೈತರು ಕಾಯುತ್ತಿದ್ದರೂ ಸಹ ಇವರ ಕಣ್ಣು ತಪ್ಪಿಸಿ ಕಾಡಾನೆಗಳು ನಾಡಿನತ್ತ ಬರುತ್ತಿದೆ.

ಇಲ್ಲಿಯ ಅರಣ್ಯ ಪ್ರದೇಶ ಕುಶಾಲನಗರ, ಸಕಲೇಶಪುರ ಸೊಮವಾರಪೇಟೆ, ಮಡಿಕೇರಿ, ಹಾಸನ ಮುಖ್ಯ ರಸ್ತೆಯ ಬದಿಯಲ್ಲಿ ಇರುವದರಿಂದ ಕಾಡಿನಿಂದ ಬಂದು ಮುಖ್ಯ ರಸ್ತೆಯಲ್ಲೆ ಸಂಚರಿಸುತ್ತಿರುವ ಕಾಡಾನೆಗಳನ್ನು ನಿಯಂತ್ರಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ.

ಎಲ್ಲಾ ರೀತಿಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವದರಿಂದ ಕಾಡಾನೆಗಳಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ. ಮರಿ ಆನೆ ಇರುವದರಿಂದ ಯಾವ ಸಂದರ್ಭದಲ್ಲಿಯೂ ಸಹ ಜನರ ಮೇಲೆ ಧಾಳಿ ಮಾಡುವ ಸಾಧ್ಯತೆ ಹೆಚ್ಚಿದೆ. ಕಣಿವೆ ಬಸವನಹಳ್ಳಿಯ ಮನೆಯ ಬಾಗಿಲಿನಲ್ಲಿಯೇ ನಿನ್ನೆ ರಾತ್ರಿ ಬೃಹತ್ ತೆಂಗಿನ ಮರವನ್ನು ನೆಲಕ್ಕುರುಳಿಸಿದೆ. ದೂರದ ಕುಶಾಲನಗರ, ಸೊಮವಾರಪೇಟೆ, ಮಡಿಕೇರಿ, ಶನಿವಾರಸಂತೆ, ಹಾಸನ ಭಾಗದ ಶಾಲಾ-ಕಾಲೆಜುಗಳಿಗೆ ಇಲ್ಲಿಯ ವಿದ್ಯಾರ್ಥಿಗಳು ತೆರಳುವದರಿಂದ ಬಸ್ಸಿಗಾಗಿ ಇಲ್ಲಿಯ ಅರಣ್ಯ ಪ್ರದೇಶದ ಬದಿಯಲ್ಲೇ ಕಾಯುವದು ಸಾಮಾನ್ಯವಾಗಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ, ಸಹ ಯಾವದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ವ್ಯಾಪ್ತಿಯ ಗ್ರಾಮಸ್ಥರು.

-ಚಿತ್ರ ವರದಿ : ದಿನೇಶ್ ಮಾಲಂಬಿ.